ಕುಶಾಲನಗರ, ಜೂ 18: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಕಟ್ಟೆಹಾಡಿ ಗಿರಿಜನ ಹಾಡಿಯಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನವನ್ನು ಸ್ಥಳೀಯ ನಿವಾಸಿಗಳ ಬಳಕೆಗೆ ಒದಗಿಸಲಾಯಿತು.
ಭಾರೀ ಮಳೆಗೆ ಸಮುದಾಯ ಭವನದ ಸಮೀಪದಲ್ಲಿದ್ದ ಬೃಹತ್ ಮರ ಭವನದ ಮೇಲೆ ಬಿದ್ದು ಕಟ್ಟಡದ ಒಂದು ಭಾಗ ತೀವ್ರ ಜಖಂಗೊಂಡಿತ್ತು. ಮಳೆಹಾನಿ ಪರಿಹಾರ ನಿಧಿಯಲ್ಲಿ ಕಟ್ಟಡ ದುರಸ್ಥಿಗೊಳಿಸಿ ಮೇಲಂತಸ್ಥಿಗೆ ಛಾವಣಿ ಅಳವಡಿಸಿ ಗಿರಿಜನರ ಕಾರ್ಯಚಟುವಟಿಕೆಗಳಿಗೆ ಒದಗಿಸಿ ಕೀಲಿಕೈ ಹಸ್ತಾಂತರಿಸಲಾಯಿತು.
ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಸಮುದಾಯ ಭವನದಲ್ಲಿ ಮತ್ತೆ ಕಾರ್ಯಚಟುವಟಿಕೆಗಳ ಆರಂಭಕ್ಕೆ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಪರಿಶಿಷ್ಟ ಪಂಗಡದವರಿಗೆ ಶುಭಸಮಾರಂಭಗಳಿಗೆ, ಸಾಮಾಜಿಕ ಕಾರ್ಯಕ್ರಮಗಳಿಗೆ ಈ ಭವನ ಅನುಕೂಲವಾಗಲಿದೆ. ಇದರ ಸದುಪಯೋಗ ಪಡೆದುಕೊಳ್ಳುವುದರೊಂದಗೆ ಶುಚಿತ್ವಕ್ಕೆ ಎಲ್ಲರೂ ಪ್ರಾಮುಖ್ಯತೆ ಒದಗಿಸಬೇಕಿದೆ ಎಂದರು.
ಒಂದು ಕಾಲದಲ್ಲಿ ಕಾಡುಮಯ ವಾತಾವರಣದಲ್ಲಿದ್ದ ಕಟ್ಟೆಹಾಡಿ ಇಂದು ಉತ್ತಮ ಸ್ಥಿತಿಯಲ್ಲಿದೆ. ಗ್ರಾಪಂ ವತಿಯಿಂದ ಈ ಭಾಗದ ಸದಸ್ಯರ ಕಾಳಜಿಯಿಂದ ಸರಕಾರದ ಸವಲತ್ತುಗಳು, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ವತಿಯಿಂದ ಕೂಡ ಹಕ್ಕುಪತ್ರ, ಮನೆ ನಿರ್ಮಾಣ, ಅಗತ್ಯ ದಾಖಲಾತಿಗಳನ್ನು ಕಲ್ಪಿಸಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಸೌಲಭ್ಯ ವಂಚಿತರಾಗಿರುವ ಇಲ್ಲಿನ ಕೆಲವು ನಿವಾಸಿಗಳಿಗೆ ಸೌಲಭ್ಯ ಕಲ್ಪಿಸಲು ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.
ಈ ಭಾಗದ ಸದಸ್ಯ ಆರ್.ಕೆ.ಚಂದ್ರ ಮಾತನಾಡಿ, ಹಾಡಿಯಲ್ಲಿರುವ 28 ಕುಟುಂಬಗಳ 120 ಕ್ಕೂ ಅಧಿಕ ಮಂದಿ ತಮ್ಮ ಮನೆ ಶುಭ ಕಾರ್ಯಗಳಿಗೆ ದೂರದ ಹೊಸಪಟ್ಟಣ, ಕಂಬಿಬಾಣೆ ಭವನಗಳನ್ನು ಆಶ್ರಯಿಸಬೇಕಿತ್ತು. ಇದೀಗ ಹಾಡಿ ಒಳಭಾಗದಲ್ಲೇ ಅವರಿಗೆ ಭವನ ಒದಗಿಸಿ ಅನುಕೂಲ ಒದಗಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಮಾವಾಜಿ ರಕ್ಷಿತ್, ಸಮೀರ, ಗಿರಿಜಮ್ಮ, ಜಾಜಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಸರಿತಾ, ವಿದ್ಯಾ, ಗ್ರಾಪಂ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ರಂಜಿತ್ ಸೇರಿದಂತೆ ಹಾಡಿ ನಿವಾಸಿಗಳು, ಗ್ರಾಮಸ್ಥರು ಇದ್ದರು.
Back to top button
error: Content is protected !!