ಕುಶಾಲನಗರ, ಜು 22: ಪತ್ರಕರ್ತರು ಸಮಾಜದ ಆಗುಹೋಗುಗಳ ಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕ ಸಮಾಜದ ಕಣ್ಗಾವಲಾಗಿ ಕಾರ್ಯನಿರ್ವಹಿಸಬೇಕೆಂದು ಶಾಸಕ ಡಾ.ಮಂತರ್ ಗೌಡ ಕರೆಕೊಟ್ಟರು.
ಕೊಡಗು ವಿಶ್ವವಿದ್ಯಾಲಯ ಹಾಗೂ ಕೊಡಗು ವಿವಿ ಹಿತರಕ್ಷಣಾ ಸಮಿತಿ ವತಿಯಿಂದ ಕೊಡಗು ವಿವಿಯ ಹಾರಂಗಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಮಾಧ್ಯಮ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
ಮಾಧ್ಯಮ ರಾಜಕಾರಣಿಗಳನ್ನು ಟೀಕಿಸಿದಷ್ಟು ಎಚ್ಚೆತ್ತುಕೊಳ್ಳಲು ಅನುಕೂಲವಾಗುತ್ತದೆ. ಸಾಮಾಜಿಕ ಜಾಲತಾಣಗಳಿಂದ ಪ್ರಿಂಟ್ ಮೀಡಿಯಾ ಕಳೆಗುಂದಬಾರದು. ವ್ಯವಸ್ಥೆಯ ಮೇಲಿನ ಕೆಲವು ಏರು ಪೇರುಗಳಿಗೆ ಆರೋಗ್ಯಕಾರಿ ಟೀಕೆ – ಟಿಪ್ಪಣಿಗಳು ಮಾಧ್ಯಮದಲ್ಲಿರಬೇಕು ಎಂದು ಆಶಿಸಿದ ಶಾಸಕರು ಕಾಲೇಜು ವಿದ್ಯಾರ್ಥಿಗಳು ಮುಕ್ತವಾಗಿ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಮಾಧ್ಯಮ ವೇದಿಕೆಯಾಗಬೇಕಿದೆ. ಹಾಗೆಯೇ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಕೊಡಗು ವಿವಿ ಉಳಿಸುವ ಹೋರಾಟದಲ್ಲಿ ಪತ್ರಕರ್ತರ ಕಾರ್ಯವನ್ನು ಇದೇ ಸಂದರ್ಭ ಶಾಸಕರು ಶ್ಲಾಘಿಸಿದರು.
ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ,
ಡಿಜಿಟಲೀಕರಣದಿಂದಾಗಿ ಸ್ಥಳೀಯ ಪತ್ರಿಕೆಗಳಿಗೆ ಧಕ್ಕೆಯಾಗದಿದ್ದರೂ ಕೂಡ ದೊಡ್ಡ ದೊಡ್ಡ ಮುದ್ರಣ ಮಾಧ್ಯಮಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ ಚಿದ್ವಿಲಾಸ್ ಅವಲೋಕಿಸಿದರು.
ಸಾಮಾಜಿಕ ಜಾಲತಾಣಗಳು ಯಾವುದೇ ವ್ಯಕ್ತಿಯನ್ನು ಕಠಿಣ ಶಬ್ಧಗಳಿಂದ ತೇಜೋವಧೆ ಮಾಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವ ಕೆಲಸ ಆಗಬಾರದು.
ಮಾಧ್ಯಮಗಳಿಂದಾಗಿ ಹೊಸ ಪ್ರತಿಭೆಗಳು ಹೊಸ ಚಿಂತನೆಗಳ ಉಗಮವಾಗುತ್ತಿದೆ ಎಂದು ಶ್ಲಾಘಿಸಿದರು.
ಯುವ ಜನಾಂಗ ಇಂದು ಸಮಾಜದಲ್ಲಿ ಅನೈತಿಕ ಚಟುವಟಿಕೆಗಳು ಹಾಗೂ ಕ್ರೌರ್ಯದತ್ತ ಮುಖ ಮಾಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಚಿದ್ವಿಲಾಸ್, ಮೊಬೈಲ್ ಗಳ ಬಳಕೆ ಎಲ್ಲರಿಗೂ ಜೀವನದ ಅವಿಭಾಜ್ಯ ವಾಗಿರುವ ಈ ಹೊತ್ತಿನಲ್ಲಿ ನಾವು ಹಿಂದಿನ ಪೂರ್ವಜರು ಯಾವುದೇ ದುರಾಸೆಗಳಿಗೂ ಒಳಗಾಗದೇ ಸಂತೃಪ್ತ ಬದುಕನ್ನು ಕಟ್ಟಿದ್ದನ್ನು ನಾವು ಅವಲೋಕಿಸಬೇಕಿದೆ ಎಂದು ವಿಶ್ಲೇಷಿಸಿದರು.
ಕೊಡಗು ವಿವಿ ಉಳಿವಿನ ಬಗ್ಗೆ ಸರ್ಕಾರ ಇದೂವರೆಗೂ ತನ್ನ ನಿಲುವು ಪ್ರಕಟಪಡಿಸದ ಹಿನ್ನೆಲೆಯಲ್ಲಿ ಶಾಸಕರು ಈ ಬಗ್ಗೆ ವಿವಿಯೊಂದಿಗೆ ಗಟ್ಟಿಯಾಗಿ ನಿಲ್ಲುವ ಮೂಲಕ ಖಾಸಗಿ ಸಂಸ್ಥೆಗಳು ನೀಡಬಹುದಾದ ಅನುದಾನಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್,
ಮಾಧ್ಯಮ ರಂಗ ಇಂದು ಪ್ರಾಮಾಣಿಕವಾಗಿ ತನ್ನ ಕೆಲಸ ಮಾಡಿದರೆ ಸಮಾಜದ ಬದಲಾವಣೆ ಸಾಧ್ಯವಿದೆ. ಶಾಸಕಾಂಗ, ಕಾರ್ಯಾಂಗ ಒಂದಷ್ಟು ಏರು ಪೇರುಗಳಿಂದ ಕೂಡಿದ್ದು ಮಾಧ್ಯಮ ರಂಗ ಆಶಾಕಿರಣವಾಗಿ ಉಳಿದಿದೆ. ರಾಜಕಾರಣಿ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಹೊಣೆಗಾರಿಕೆಯ ಪ್ರಾಮುಖ್ಯತೆ ಪತ್ರಿಕೆಗಳದ್ದಾಗಿದೆ.
ಕೊಡಗು ವಿವಿ ಹೋರಾಟದ ವಿಚಾರದಲ್ಲಿ ಕೊಡಗಿನ ಮಾಧ್ಯಮಗಳ ರಚನಾತ್ಮಕವಾದ ಹಾಗೂ ಸಾಮಾಜಿಕ ಜವಾಬ್ದಾರಿ ಅವಿಸ್ಮರಣೀಯ.
ಕೊಡಗು ವಿಶ್ವವಿದ್ಯಾಲಯಕ್ಕೆ ಶಾಸಕರ ವಿವೇಚನಾ ನಿಧಿಯಿಂದ ಪೂರಕವಾದ ಗರಿಷ್ಠ ಅನುದಾನವನ್ನು ಕೊಡಬೇಕು ಎಂದು ಇದೇ ಸಂದರ್ಭ ಮನವಿ ಮಾಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಡಿಜಿಟಲ್ ಕ್ರಾಂತಿಯಿಂದಾಗಿ ಪತ್ರಿಕೋದ್ಯಮದ ಸ್ವರೂಪ ಸಂಪೂರ್ಣವಾಗಿ ಬದಲಾಗಿದ್ದು, ಪತ್ರಕರ್ತರು ಕೇವಲ ಪತ್ರಕರ್ತರಾಗಿ ಉಳಿದಿಲ್ಲ. ಹೀಗಾಗಿ ಭವಿಷ್ಯದಲ್ಲಿ ಪತ್ರಕರ್ತರಾಗುವವರು ಹಲವು ಕೌಶಲಗಳನ್ನು ಕರಗತ ಮಾಡಿಕೊಳ್ಳುವುದು ಅಗತ್ಯವಾಗಿದೆ. ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಂಡು ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಪತ್ರಿಕಾರಂಗ ಪ್ರಜಾಪ್ರಭುತ್ವದ ಬಲಿಷ್ಠತೆ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಬಹು ಮುಖ್ಯ ಪಾತ್ರ ವಹಿಸಿದೆ ಎಂದರು.
ಈ ಸಂದರ್ಭ ಕೊಡಗು ವಿವಿ ಕುಲಸಚಿವ ಎಂ.ಸುರೇಶ್, ಕೊಡಗು ವಿವಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.
ಉಪನ್ಯಾಸಕ ಡಾ.ಜಮೀರ್ ಅಹಮದ್ ನಿರೂಪಿಸಿದರು.
Back to top button
error: Content is protected !!