ಕುಶಾಲನಗರ, ಅ 27: ಕೂಡುಮಂಗಳೂರು ಗ್ರಾಪಂನ 2022-23ನೇ ಸಾಲಿನ ಗ್ರಾಮಸಭೆ ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಸುಂದರನಗರ ಗ್ರಾಮದಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿ ಗ್ರಾಮಸ್ಥರ ಸಂಖ್ಯೆ ಕಡಿಮೆಯಿರುವ ಕಾರಣ ಸಭೆಯನ್ನು ಮುಂದೂಡಿ ಎಂದು ಗ್ರಾಮಸ್ಥರಾದ ಸಿ.ವಿ.ನಾಗೇಶ್ ಮತ್ತಿತರರು ಆಕ್ರೋಷ ವ್ಯಕ್ತಪಡಿಸಿದರು. ಸಭೆಯ ಆಹ್ವಾನ ಪತ್ರಿಕೆಯಲ್ಲಿ ಲೋಪಗಳಿರುವ ಬಗ್ಗೆ ವರದರಾಜದಾಸ್ ಆಕ್ರೋಷ ವ್ಯಕ್ತಪಡಿಸಿದರು.
ಆಹ್ವಾನ ಪತ್ರಿಕೆಯಲ್ಲಿ ಲೋಪಗಳಾಗಿರುವ ಬಗ್ಗೆ ಗ್ರಾಪಂ ಹಿರಿಯ ಸದಸ್ಯ ಕೆ.ಕೆ.ಭೋಗಪ್ಪ ಸಭೆಯಲ್ಲಿ ಕ್ಷಮೆಯಾಚಿಸಿದರು.
ನಾಡಗೀತೆ ಹಾಡುವ ಸಂದರ್ಭ ಧ್ವನಿಮುದ್ರಿಕೆ ಹಾಕಿರುವುದಕ್ಕೆ ಆಕ್ರೋಷ ವ್ಯಕ್ತಗೊಂಡಿತು.
ಇತ್ತೀಚೆಗೆ ಮೃತರಾದ ಗ್ರಾಪಂ ಪೌರಕಾರ್ಮಿಕ ರಂಗ ಸೇರಿದಂತೆ ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿದ್ದ ಮೃತರಿಗೆ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಸೌಲಭ್ಯಗಳು, ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಒದಗಿಸಿದರು.
ಕೂಡಿಗೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದುರಹಂಕಾರದ ವರ್ತನೆ ತೋರುತ್ತಿದ್ದಾರೆ. ತಪಾಸಣೆಗೆ ತೆರಳಿದರೆ ಚಪ್ಪಲಿ ಹೊರಗೆ ಬಿಟ್ಟು ಒಳಹೋಗಲು ತಾಕೀತು ಮಾಡುತ್ತಾರೆ. ಗರ್ಭಿಣಿಯರನ್ನು ಸೂಕ್ತ ತಪಾಸಣೆ ನಡೆಸುತ್ತಿಲ್ಲ ಎಂದು ಸಿವಿ.ನಾಗೇಶ್, ಗೋವಿಂದರಾಜ್ ದಾಸ್ ಆಕ್ರೋಷ ವ್ಯಕ್ತಪಡಿಸಿದರು.
ಇಂತಹ ವಿಚಾರಗಳನ್ನು ಆರೋಗ್ಯ ರಕ್ಷಾ ಸಮಿತಿಯಲ್ಲಿ ಚರ್ಚಿಸಿ ವೈದ್ಯರ ಗಮನಕ್ಕೆ ತರಲು ಗ್ರಾಮಸ್ಥ ಚಂದನ್ ಸಲಹೆ ನೀಡಿದರು.
ಹಿಂದಿನ ಗ್ರಾಮಸಭೆಯ ನಿರ್ಣಯಗಳನ್ನು ಪಿಡಿಒ ಸಂತೋಷ್ ಸಭೆ ಓದಿ ತಿಳಿಸಿದರು.
ಶಿಕ್ಷಣ ಇಲಾಖೆಯ ಕಾಳನಾಯಕ ಸಭೆಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಸೇರಿದಂತೆ ಗ್ರಾಪಂ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಇದ್ದರು.