ಕುಶಾಲನಗರ, ಡಿ 11: ಭವಿಷ್ಯದ ಸಮೃದ್ಧ ಹಾಗೂ ಸಂಪದ್ಭರಿತವಾದ ಭಾರತ ದೇಶದ ಆರೋಗ್ಯವಂತ ಸಮಾಜ ನಿರ್ಮಾಣದ ಕನಸು ವಿದ್ಯಾರ್ಥಿಗಳ ಗುರಿಯಾಗಬೇಕೆಂದು ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ಡಾ. ಬಿ.ಎನ್.ರಘುನಾಥ್ ಕರೆಕೊಟ್ಟರು.
ಕುಶಾಲನಗರದ ಕನ್ನಡ ಭಾರತಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು,
ಕೆಳ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸ ಮರೀಚಿಕೆಯಾಗಿದ್ದ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸಾಹು ಮಹಾರಾಜ್, ಸಾವಿತ್ರಿ ಬಾಯಿ ಪುಲೆ ಸೇರಿದಂತೆ ಅನೇಕ ಮಹಾತ್ಮರು ಶಾಲೆಗಳನ್ನು ತೆರೆದು ಬಡ ಮಕ್ಕಳಿಗೆ ಹಾಗೂ ಕೆಳ ಸಮುದಾಯದ ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡಿರುವುದರಿಂದ ಅವರ ಸ್ಮರಿಸಬೇಕು. ಹಾಗೆಯೇ
ವಿದ್ಯಾರ್ಥಿಗಳಿಗೆ ಕೀಳರಿಮೆ ಸಲ್ಲದು ಎಂದು ಹೇಳಿದ ಡಾ.ರಘುನಾಥ್, ಪ್ರತೀ ರಂಗಗಳಲ್ಲೂ ದಾಪುಗಾಲಿಟ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು.
ಜೊತೆಗೆ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಕ್ಕಾಗಿ ಕಾಯದೇ ಸಿಕ್ಕ ಸಿಕ್ಕ ಅವಕಾಶಗಳನ್ನು ಗಿಟ್ಟಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಇರುವ ಅವಕಾಶಗಳನ್ನು ಗಿಟ್ಟಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕೆಂದು ಕರೆಕೊಟ್ಟರು.
ಮುಖ್ಯ ಅತಿಥಿಯಾಗಿದ್ದ ಹುಣಸವಾಡಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನರಸೇಗೌಡ ಮಾತನಾಡಿ,
ಕಾಲೇಜು ವಾರ್ಷಿಕೋತ್ಸವ ಎಂಬುದು ವಿದ್ಯಾರ್ಥಿಗಳಲ್ಲಿ ಅಡಗಿರುವಂತಹ ಸುಪ್ತವಾದ ಪ್ರತಿಭೆಗಳ ಪ್ರಜ್ವಲನದ ವೇದಿಕೆಯ ಜೊತೆಗೆ ವಿದ್ಯಾಸಂಸ್ಥೆಯ ಸಾಂಸ್ಕ್ರತಿಕ ಹಬ್ಬವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸಕಾರಾತ್ಮಕವಾದ ಮನೋಭಾವದೊಂದಿಗೆ ಪಠ್ಯದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕ್ರತಿಕ ರಂಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ನರಸೇಗೌಡ ಕರೆಕೊಟ್ಟರು.
ಕನ್ನಡ ಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಲ್ಕು ವಸಂತಗಳನ್ನು ಪೂರೈಸಿರುವ ಕನ್ನಡ ಭಾರತಿ ವಿದ್ಯಾಸಂಸ್ಥೆಯಲ್ಲಿ ಗುಣ ಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಅಂತೆಯೇ ಬಡತನ ರೇಖೆಯ ಕೆಳಗಿನ ನೂರಾರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿರುವ ಹೆಮ್ಮೆ ಇದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಂದ್ರ ಸ್ವಾಮಿ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು.
ಕೊಪ್ಪಾದ ಮಿಳಿಂದ ಪ್ರೌಢಶಾಲೆ ಮುಖ್ಯ ಶಿಕ್ಷಕ ಸತೀಶ್, ಪದವಿ ವಿಭಾಗದ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಇದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯವಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.
Back to top button
error: Content is protected !!