ಸಭೆ

ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದಲ್ಲಿ ಸಂಸದರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ

ಕುಶಾಲನಗರ, ನ 13:(ಕುಶಲವಾಣಿ) ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದಲ್ಲಿ ಸಂಸದರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ರಾಮದ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ನಿವಾಸಿಗಳು ತಮ್ಮ ಅಹವಾಲುಗಳನ್ನು ಸಲ್ಲಿಕೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ
ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ,
ಗ್ರಾಮ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಬಹುತೇಕ ಫಲಾನುಭವಿಗಳು ಹಕ್ಕುಪತ್ರದಿಂದ ವಂಚಿತರಾಗಿದ್ದಾರೆ. ಸರ್ವೆ ನಂ 10/1 ರಲ್ಲಿ 125,
1/1 ರ ವಿರುಪಾಕ್ಷಪುರದಲ್ಲಿ 18, 1/2 ರ ಹೊಸಪಟ್ಟಣದಲ್ಲಿ 17 ಹಕ್ಕುಪತ್ರಕ್ಕೆ ಸಲ್ಲಿಸಿದ ಅರ್ಜಿಗಳು ಬಾಕಿಯಿದೆ.ಕಾಡಾನೆ ಹಾವಳಿ ಮಿತಿಮೀರಿದೆ, ಹುಲಿ, ಚಿರತೆ ಸಂಚಾರ ಕೂಡ ವ್ಯಾಪಕವಾಗಿದೆ. ರೈತರಿಗೆ ಬೆಳೆ ಪರಿಹಾರ ಲಭಿಸುತ್ತಿಲ್ಲ, ಸಮುದಾಯ ಆರೋಗ್ಯ ಕೇಂದ್ರದ ಜಾಗದ ಬಗ್ಗೆ ವಿವಾದ ಉಂಟಾಗಿದೆ, 1/1, 10/1 ಸರ್ವೆ ನಂಬರ್ ನಲ್ಲಿನ ನಿವಾಸಿಗಳಿಗೆ ಗ್ರಾಪಂ ನಿಂದ ಕಟ್ಟಡ ನಿರ್ಮಾಣಕ್ಕೆ ಎನ್.ಒ.ಸಿ.ನೀಡಲು ಅಡ್ಡಿ ಎದುರಾಗಿದೆ ಎಂದು ಸಮಸ್ಯೆಗಳ ಬಗ್ಗೆ ಸಂಸದರ ಗಮನಕ್ಕೆ ತಂದು ಪರಿಹಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು. ಹೊಸಪಟ್ಟಣ ಸಮುದಾಯ ಭವನ ಅಭಿವೃದ್ಧಿಗೆ ಅನುದಾನ ಒದಗಿಸಲು ಕೋರಿದರು. ನಂಜರಾಯಪಟ್ಟಣ ಗ್ರಾಮವನ್ನು ಹೋಬಳಿ ಕೇಂದ್ರವಾಗಿಸಲು ಗ್ರಾಮಸ್ಥರ ಪರವಾಗಿ ಅವರು ಬೇಡಿಕೆಯಿಟ್ಟರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೂ ಆದ ನಂಜರಾಯಪಟ್ಟಣ ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಮಾತನಾಡಿ, ಕ್ಷೇತ್ರದ ಶಾಸಕರ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಸಂಸದರು ಇತ್ಯರ್ಥಪಡಿಸಬೇಕೆನ್ನುವುದು ಕಷ್ಟಸಾಧ್ಯ ಕೆಲಸ. ಆದರೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಕ್ರಮವಹಿಸಬಹುದು. ಗ್ರಾಮದಲ್ಲಿ‌ ಮೊಬೈಲ್ ನೆಟ್ವರ್ಕ್ ವ್ಯವಸ್ಥೆ ತೀರಾ ಹದಗೆಟ್ಟಿದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ. ದುಬಾರೆ, ಮಾವಿನಹಳ್ಳ, ಕಬ್ಬಿನಗದ್ದೆ ಹಾಡಿಗಳಿಗೆ ಸಮಪರ್ಕ ವಿದ್ಯುತ್ ವ್ಯವಸ್ಥೆ ಒದಗಿಸಬೇಕಿದೆ. ಅರಣ್ಯ ಹಕ್ಕು ಕಾಯ್ದೆಯಡಿ ದೊರಬೇಕಾದ ಹಕ್ಕುಪತ್ರ ವಂಚಿತರಿಗೆ ಶೀಘ್ರವಾಗಿ ಹಕ್ಕುಪತ್ರ ದೊರೆಯುವಂತಾಗಬೇಕಿದೆ. ಹಾಲಿ ಶಾಸಕರು ಕೂಡ ಈ ಬಗ್ಗೆ ಗಮನಹರಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಮಾಜಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಅರಣ್ಯ ಸಚಿವರ ಆದೇಶಗಳಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಿ ಅಂಡ್ ಡಿ ಲ್ಯಾಂಡ್ ವಿಚಾರವಾಗಿ ಗೊಂದಲ ಮೂಡಿಸಿ ಒಕ್ಕಲೆಬ್ಬಿಸುವ ಕಾರ್ಯ ನಡೆಸುತ್ತಿದ್ದಾರೆ.
ಕ್ಷೇತ್ರದ ಜನತೆಗೆ ಸಮಸ್ಯೆಗೆ ಧ್ವನಿ ಎತ್ತಲು ಜಿಲ್ಲೆಯ ಶಾಸಕರುಗಳು ವಿಫಲರಾಗಿದ್ದಾರೆ. ಜಿಲ್ಲೆಯ ಜನರಿಗೆ ಉಂಟಾಗಲಿರುವ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ತೀವ್ರವಾಗಿ ವಿರೋಧಿಸುವ ಕಾರ್ಯ ಮಾಡಬೇಕಿದೆ. ಶಾಸಕಾಂಗದ ಬಲದ ಮೂಲಕ ಜನಪರ ಕಾನೂನುಗಳ ರಚನೆಗೆ ಕ್ರಮವಹಿಸಬೇಕಿದೆ ಎಂದರು.

ಜನರ ಸಮಸ್ಯೆಗಳನ್ನು ಆಲಿಸಿ‌ ಮಾತನಾಡಿದ ಸಂಸದ ಯದುವೀರ್ ಅವರು, ಗ್ರಾಪಂ ಅಧ್ಯಕ್ಷರ‌ ಅಹವಾಲುಗಳನ್ನು ಹಂತಹಂತವಾಗಿ ಬಗೆಹರಿಸುವ ಭರವಸೆ ನೀಡಿದರು. ದೊರೆಯುವ ಅನುದಾನವನ್ನು ನಾಯಕರೊಡಗೂಡಿ ಚರ್ಚಿಸಿ ಸಮರ್ಪಕವಾಗಿ ಹಂಚುವ ಮೂಲಕ ತಮ್ಮ ಮೂಲಕ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಇತರೆ ಯೋಜನೆಗಳ ಅನುದಾನ ಬಳಸಿ ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳಿಗೆ ಹಣ ವಿನಿಯೋಗಲಾಗಿಸುತ್ತಿದೆ. ಉಚಿತ ಯೋಜನೆಗಳು ನೀಡುವುದು ತಪ್ಪಲ್ಲ. ಆದರೆ ಅದು ಸಮತೋಲನದಿಂದ ಕೂಡಿರಬೇಕಿದೆ. ಉಚಿತ ಯೋಜನೆಗಳು ಬೇಕೆ ಅಥವಾ ಅಭಿವೃದ್ಧಿ ಬೇಕೆ ಎನ್ನುವ ಬಗ್ಗೆ ಜನತೆ ತೀರ್ಮಾನಿಸಬೇಕಿದೆ. ಪ್ರಧಾನಿ ಮೋದಿ ಅವರು ಎಲ್ಲಾ ವರ್ಗದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ‌ ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಸಂಸದರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಬಿಜೆಪಿ‌ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್,
ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಅರುಣಕುಮಾರಿ, ನಂಜರಾಯಪಟ್ಟಣ ಗ್ರಾಪಂ ಸದಸ್ಯರಾದ ರಕ್ಷಿತ್ ಮಾವಜಿ, ಗಿರಿಜಮ್ಮ, ಸೋಮವಾರಪೇಟೆ ‌ಮಂಡಲ‌ ಬಿಜೆಪಿ ಅಧ್ಯಕ್ಷ ಎಂ.ಎಲ್.ಗೌತಮ್, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಕುಮಾರಪ್ಪ, ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುರಳಿ‌ಮಾದಯ್ಯ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪಳ್ಳಿ ರವೀಂದ್ರ ವೇದಿಕೆಯಲ್ಲಿದ್ದರು. ಶಿಕ್ಷಕ ನಾಗರಾಜು ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!