ಕುಶಾಲನಗರ, ಸೆ 18: ಸೋಮವಾರಪೇಟೆ, ಕುಶಾಲನಗರ ತಾಲೂಕಿನ ಗಿರಿಜನ ದೊಡ್ಡಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಆರ್.ಅರುಣ್ ರಾವ್ ಅಧ್ಯಕ್ಷತೆಯಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಕಳೆದ ಬಾರಿಯ ನಡಾವಳಿ ಓದಿ ಅಂಗೀಕರಿಸಲಾಯಿತು. 2024-25ನೇ ಸಾಲಿನ ಆಡಳಿತ ಮಂಡಳಿ ವರದಿ, ಲೆಕ್ಕ ಪರಿಶೀಲನಾ ವರದಿ, 2025-26ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿ ಅಂಗೀಕರಿಸಲಾಯಿತು. ಮುಂಬರುವ ಸಾಲಿಗೆ ಲೆಕ್ಕ ಪರಿಶೋಧಕರ ಆಯ್ಕೆ ಮಾಡುವುದು, ಹಿಂದಿನ ಸಾಲಿನ ಬಜೆಟ್ ಗಿಂತ ಹೆಚ್ಚಿನ ಖರ್ಚಿನ ಅನುಮೋದನೆ ಪಡೆಯಲಾಯಿತು.
ಇದೇ ಸಂದರ್ಭ ಸಂಘದ ಅಧ್ಯಕ್ಷರು ಪರಿಶಿಷ್ಟ ಪಂಗಡಕ್ಕೆ ಸೇರುವುದಿಲ್ಲ ಎಂದು ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಹೊರಡಿಸಿರುವ ಬಗ್ಗೆ ಸಂಘದ ಮಾಜಿ ಅಧ್ಯಕ್ಷ ಆರ್.ಕೆ.ಚಂದ್ರ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದರು. ಈ ವಿಚಾರಕ್ಕೆ ಅಧ್ಯಕ್ಷರ ಪ್ರತಿಕ್ರಿಯೆ ಬಯಸಿದ ಸಂದರ್ಭ ಪರ ವಿರೋಧ ಚರ್ಚೆ ನಡೆಯಿತು. ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿದ್ದಾರೆ. ಮಹಾಸಭೆಯಲ್ಲಿ ಇದರ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಒಂದು ಗುಂಪು ಪ್ರತಿಪಾದಿಸಿತು. ಈ ಸಂದರ್ಭ ಸಭೆಯಲ್ಲಿ ತೀವ್ರ ವಾಗ್ವಾದ ಏರ್ಪಟ್ಟು ಗೊಂದಲದ ವಾತಾವರಣ ಸೃಷ್ಟಿಯಾಯಿತು. ನ್ಯಾಯಾಲಯದ ಆದೇಶದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಧ್ಯಕ್ಷ ಎಸ್.ಆರ್.ಅರುಣ್ ರಾವ್ ತಿಳಿಸಿದರು. ಉಳಿದಂತೆ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಯ ಸದಸ್ಯರಿಂದ ಸಲಹೆ ಸೂಚನೆ, ಚರ್ಚೆ ನಡೆಯಿತು. ಕಿರು ಅರಣ್ಯ ಉತ್ಪನ್ನ ಸಂಗ್ರಹ, ವ್ಯಾಪಾರ ಯೋಜನೆಗಳು,
ಸದಸ್ಯರು ಸಕ್ರಿಯ ವಹಿವಾಟು ನಡೆಸುವುದು, ಸದಸ್ಯತ್ವ ನೀಡುವುದು ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಆರ್.ಅರುಣ್ ರಾವ್,
ಸಂಘವನ್ನು ಲಾಭದತ್ತ ಕೊಂಡೊಯ್ಯಲು ಸದಸ್ಯರ ಸಹಕಾರ ಅತಿಮುಖ್ಯ. ಅರಣ್ಯ ಕಿರು ಉತ್ಪನ್ನಗಳ ಸಂಗ್ರಹ, ಮಾರಾಟಕ್ಕೆ ಪೂರಕವಾದ ನೂತನ ಕಟ್ಟಡ ನಿರ್ಮಾಣದ ಚಿಂತನೆ ಹೊಂದಲಾಗಿದೆ. ಸದಸ್ಯತ್ವ ಹೆಚ್ಚಳಕ್ಕೆ ಕೂಡ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಸದಸ್ಯರಿಗೆ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಆಡಳಿತ ಮಂಡಳಿ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಕಾವೇರಿ, ಸಿಇಒ ಹನಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದರಾಜು ಸೇರಿದಂತೆ ನಿರ್ದೇಶಕರು ಇದ್ದರು.
Back to top button
error: Content is protected !!