ಕುಶಾಲನಗರ, ನ 14: ಪರಿಸರದಲ್ಲಿ ಗಿಡ ಮರಗಳು ಮನುಕುಲಕ್ಕೆ ಆಮ್ಲಜನಕವನ್ನು ಬಿಟ್ಟು ಕೊಟ್ಟು ಉಪಕಾರ ಮಾಡಿದರೆ, ಅದೇ ಗಿಡಮರಗಳು ಇಂಗಾಲದ ಡೈಯಾಕ್ಸೈಡ್ ಸ್ವೀಕರಿಸಿ ತಾವು ಬದುಕುತ್ತವೆ. ಇದು ಪರಿಸರ ಕೊಡು-ಕೊಳ್ಳುವ ನೀತಿಯನ್ನು ಪಾಲಿಸುವುದಾಗಿದೆ ಎಂದು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ನಾಗರತ್ನ ಹೇಳಿದರು.
ಕುಶಾಲನಗರದ ಅರಣ್ಯ ಇಲಾಖೆ, ಕಾವೇರಿ ಪರಿಸರ ರಕ್ಷಣಾ ಬಳಗ ಮತ್ತು ಸರಕಾರಿ ಪ್ರೌಢಶಾಲೆಯ ನಿಸರ್ಗ ಇಕೋ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ “ವೃಕ್ಷಮಾತೆ, ಪದ್ಮಶ್ರೀ ವಿಜೇತರೂ, ಡಾ. ಸಾಲುಮರದ ತಿಮ್ಮಕ್ಕ” ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಗರೀಕರಣದ ದಾಳಿಗೆ ತುತ್ತಾದ ಸ್ವಾಭಾವಿಕ ಸಸ್ಯ ಸಂಕುಲ ಪ್ರತಿಕ್ಷಣವೂ ನಾಶವಾಗುತ್ತಿದೆ. ಕೈಗಾರಿಕೆಗಳ ಸ್ಥಾಪನೆಯಿಂದ ಕ್ಲೋರೋ ಫ್ಲೋರೋ ಕಾರ್ಬನ್ ಹೊರಹೊಮ್ಮುವುದು, ಓಜೋನ್ ಪದರದ ಮೇಲೆ ದಾಳಿಯಾಗುತ್ತಿದೆ. ಆ ಕಾರಣದಿಂದ ಸೂರ್ಯನ ಅತಿನೇರಳೆ ಕಿರಣಗಳು ಭೂಮಿಯನ್ನು ತಾಕುವ ಮೂಲಕ ಮನುಕುಲದ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಪ್ರತಿಯೊಬ್ಬರು ಸಾಲುಮರದ ತಿಮ್ಮಕ್ಕನಂತೆ ಪರಿಸರದ ಕಾಳಜಿಯಿಂದ ತಮ್ಮ ತಾಯಿ-ತಂದೆಯರ
ನೆನಪಿನಲ್ಲಿ ಗಿಡ ನೆಡುವ ಮೂಲಕ ಉತ್ತಮ ವಾತಾವರಣಕ್ಕೆ ಕಾರಣರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಸಂಘಟಕರಾದ ಪರಿಸರ ರಕ್ಷಣಾ ಬಳಗದ ಪ್ರಮುಖ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, 115 ವರ್ಷಗಳ ಹಿಂದೆ ಹುಟ್ಟಿದ ಒಬ್ಬ ಸಾಮಾನ್ಯ ಹೆಣ್ಣು ಮಗಳು, ಪರಿಸರದ ಕಾಳಜಿಯನ್ನು ಹೊತ್ತು, ಸಾಂಸಾರಿಕ ಜೀವನದಲ್ಲಿ ಮಕ್ಕಳನ್ನು ಕಾಣದೆ, ತನ್ನ ಸಂಪೂರ್ಣ ಜವಾಬ್ದಾರಿಯನ್ನು ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸುವ ಕಾಯಕದತ್ತ ಗಮನ ಹರಿಸಿದವರು ಸಾಲುಮರದ ತಿಮ್ಮಕ್ಕ.
ಸಾವಿರಾರು ಸಸ್ಯಗಳನ್ನು ನೆಟ್ಟು ಬೆಳೆಸಿ, ತಾನು ಹುಟ್ಟಿದ ಜಿಲ್ಲೆ, ರಾಜ್ಯ, ದೇಶ ಎಲ್ಲೆಡೆ ಹೆಸರುಗಳಿಸಿ, ಬೇರೆಯವರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಅಂತಹ ಮಹಾನ್ ಚೇತನದ ಸ್ಮರಣೆ ಮಾಡುವ ಈ ಕಾರ್ಯಕ್ರಮ ವಿದ್ಯಾರ್ಥಿಗಳು- ಶಿಕ್ಷಕರು ಮತ್ತು ಜನಸಾಮಾನ್ಯರಲ್ಲಿ ಪರಿಸರದ ಕಾಳಜಿಯನ್ನು ಹೆಚ್ಚು ಮಾಡಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ಡಿ.ಆರ್. ಎಫ್.ಓ. ಉಮೇಶ್ ಮತ್ತು ನಿವೃತ್ತ ಯೋಧ ಕರುಂಬಯ್ಯ ಅವರು ಮಾತನಾಡಿ, ಪರಿಸರದೊಂದಿಗೆ ಯಾರು ಇರುತ್ತಾರೆ ಅವರು ಸದಾ ಸುಖಿಗಳಾಗಿರುತ್ತಾರೆ. ಆದ್ದರಿಂದ ಸಮಾಜದ ಎಲ್ಲರೂ ಪ್ರಕೃತಿಯೊಂದಿಗೆ ಸಹಜೀವನ ನಡೆಸಲು ಮುಂದಾಗಬೇಕು. ಆ ಮೂಲಕ ಪ್ರಕೃತಿಯನ್ನು ಪ್ರೀತಿಸಬೇಕು ಎಂದು ಹೇಳಿದರು.
ಶಾಲಾ ವಿದ್ಯಾರ್ಥಿನಿಯರಾದ ಕು. ಪೂರ್ವಿ ಮತ್ತು ದುರ್ಗಾಪರಮೇಶ್ವರಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಮಂಜುನಾಥ್. ಎ.ಸಿ, ಸದಾಶಿವಯ್ಯ ಎಸ್. ಪಲ್ಲೆದ್, ದೇವಕಿ ಗೋಪಾಲ್, ರಜನಿ ರವೀಂದ್ರ, ರಶ್ಮಿ, ಅಮೀನ, ಕಮಲ ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲು ಶಾಲಾ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ಅವರ ನೆನಪಿನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ನಿರ್ವಹಣೆಯನ್ನು ನಿವೃತ್ತ ಶಿಕ್ಷಕ ಉ.ರಾ.ನಾಗೇಶ್, ನಿವೃತ್ತ ಉಪನ್ಯಾಸಕ ಸಬಲಂ ಭೋಜಣ್ಣ ರೆಡ್ಡಿ, ಮತ್ತು ಕಾವೇರಿ ಪರಿಸರ ಸಂರಕ್ಷಣಾ ಬಳಗದ ವನಿತಾ ಚಂದ್ರಮೋಹನ್ ನಿರ್ವಹಿಸಿದರು.
Back to top button
error: Content is protected !!