ಕಾಮಗಾರಿ

ಚಿಕ್ಕಬೆಟಗೇರಿಯಲ್ಲಿ ರೂ. 5.80 ಕೋಟಿ ವೆಚ್ಚದ ಮಹಿಳಾ ಪಿಯು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಬೇಕು : ಶಾಸಕ ಡಾ.ಮಂತರ್ ಗೌಡ

ಕುಶಾಲನಗರ, ನ 13: : ರಾಜ್ಯ ಸರಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಗುಡ್ಡೆಹೊಸೂರು ಗ್ರಾಪಂ‌ ವ್ಯಾಪ್ತಿಯ ಚಿಕ್ಕಬೆಟಗೇರಿ ಗ್ರಾಮದಲ್ಲಿ ರಾಜ್ಯ ವಕ್ಪ್ ಮತ್ತು ಅಲ್ಪಸಂಖ್ಯಾತ ಮಂಡಳಿ ವತಿಯಿಂದ ರೂ 5.80 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಹಿಳಾ ಪದವಿಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೆಣ್ಣು ಮಕ್ಕಳ ಶಿಕ್ಷಣ ಹೆಚ್ಚಿನ ಮಹತ್ವ ನೀಡಿದ್ದಾರೆ. ಹೆಣ್ಣು ಮಕ್ಕಳಿಗೆ ಪಿಯುಸಿ ವಿದ್ಯಾಭ್ಯಾಸ ಮುಗಿದರೆ ಸಾಕು, ಮದುವೆ ಮಾಡಿಬಿಡೋಣ ಎಂಬುದು ಎಲ್ಲಾ ತಂದೆ-ತಾಯಿಗಳ ಮನಸ್ಥಿತಿ. ಈ ಮನಸ್ಥಿತಿ ಬದಲಾಗಬೇಕು. ಅಂಬೇಡ್ಕರ್ ಅವರ ಆಶಯದಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣದಲ್ಲೂ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದರು.ಇವತ್ತಿನ ಮಕ್ಕಳು ನೀನೇನು ಓದಿದ್ದೀಯಾ ಎಂದು ನಮ್ಮನ್ನೇ ಪ್ರಶ್ನೆ ಕೇಳುವಷ್ಟು ಪ್ರಜ್ಞಾವಂತರು. ಆ ಭಯಕ್ಕಾದರೂ ನಾವು ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಈ ಕಾಲೇಜು ಕಟ್ಟಡದಿಂದ ಕುಶಾಲನಗರ ಭಾಗದ ನೂರಾರು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇದರ ಸದ್ಬಳೆಯಾಗಬೇಕಿದೆ. ಸುಸಜ್ಜಿತ ವಸತಿ ನಿಲಯ ನಿರ್ಮಾಣಕ್ಕೆ ಕೂಡ ಆದ್ಯತೆ ನೀಡಲಾಗುತ್ತದೆ. ಮೀಸಲು ಅನ್ವಯ ಸಮುದಾಯದ ವಿದ್ಯಾರ್ಥಿನಿಯರ ದಾಖಲಾತಿ ಕುಂಠಿತವಾದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿನಿಯರಿಗೂ ಹೆಚ್ಚಿನ ಅವಕಾಶ ದೊರಯಲಿದೆ ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ‌ ನಿರ್ಮಾಣ ಯೋಜನೆ‌ ಕೂಡ ಪ್ರಗತಿ ಹಂತದಲ್ಲಿದೆ‌ ಎಂದು ತಿಳಿಸಿದರು.

ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕಾಲೇಜು ನಿರ್ಮಾಣದಿಂದ ಈ ಪ್ರದೇಶದಲ್ಲಿ‌ ಮೂಲಸೌಕರ್ಯ ಹಂತಹಂತವಾಗಿ ಅಭಿವೃದ್ದಿ ಹೊಂದುವುದಾಗಿ ತಿಳಿಸಿದರು.

ಕುಶಾಲನಗರ ಜಾಮಿಯಾ ಮಸೀದಿ ಸಮಿತಿ ಕಾರ್ಯದರ್ಶಿ ಶಫಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ
ಅಲ್ಲಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಅಧ್ಯಕ್ಷ ಅಬ್ದುಲ್ ರಜಾಕ್, ಕುಶಾಲನಗರ ಜಾಮಿಯಾ ಮಸೀದಿ ಅಧ್ಯಕ್ಷ ಮೆಹ್ತಾಬ್ ಅಹಮದ್, ಮಾಜಿ ಅಧ್ಯಕ್ಷರಾದ ಫಜಲುಲ್ಲಾ, ಅಲೀಂ,
ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಪ್ರಮುಖರಾದ ಇರ್ಫಾನ್, ಬೆಳ್ಳಿಯಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!