ಸಾಮಾಜಿಕ

ದಾನಿಗಳ ನೆರವಿನಿಂದ ಮೈದಾನಕ್ಕೆ ಫ್ಲಡ್ ಲೈಟ್ ಅಳವಡಿಕೆ‌

ಕುಶಾಲನಗರ, ನ 01: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಸಾರ್ವಜನಿಕ ಮೈದಾನಕ್ಕೆ ಫ್ಲಡ್ ಲೈಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ‌ ನೀಡಲಾಯಿತು.

ಚಿಕ್ಕತ್ತೂರು ಗೆಳೆಯರ ಬಳಗದ ಆಶ್ರಯದಲ್ಲಿ ದಾನಿಗಳ‌ ಸಹಕಾರದೊಂದಿಗೆ ರೂ 8 ಲಕ್ಷ ವೆಚ್ಚದಲ್ಲಿ ಫ್ಲಡ್ ಲೈಟ್ ಅಳವಡಿಸಲಾಗುತ್ತಿದೆ.
ಮೈದಾನ ಸುತ್ತಲೂ 6 ಬೃಹತ್ ಕಂಬಗಳ ಜೋಡಣೆ ಕಾರ್ಯಕ್ಕೆ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು. ಕೂಡುಮಂಗಳೂರು ಗ್ರಾಪಂ ಪಿಡಿಒ ಹೇಮಲತಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಗದ ವತಿಯಿಂದ ಗ್ರಾಮದಲ್ಲಿ ಹಲವು‌ ಸಮಾಜಮುಖಿ‌ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿರುವುದು ಶ್ಲಾಘನೀಯ ಸಂಗತಿ. ಗ್ರಾಮದ ಸ್ವಚ್ಚತೆ, ಶುದ್ದ ಕುಡಿವ ನೀರಿನ ಜೊತೆಗೆ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.  ಗ್ರಾಪಂ ವತಿಯಿಂದ ಅಗತ್ಯ ಸಹಕಾರ ಒದಗಿಸಲಾಗುತ್ತದೆ ಎಂದು‌ ಪಿಡಿಒ ಅವರು ಭರವಸೆ‌ ನೀಡಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ,
ಚಿಕ್ಕತ್ತೂರು ಗ್ರಾಮದಲ್ಲಿ ನಡೆಯುತ್ತಿರುವ ಸಾಮಾಜಿಕ ಚಟುವಟಿಕೆ ಗ್ರಾಮದ ಮೇಲಿನ ಪ್ರೀತಿಯನ್ನು ತೋರ್ಪಡಿಸುತ್ತದೆ. ಯುವ ಸಮೂಹವನ್ನು ದುಶ್ಚಟ, ವ್ಯಸನ ಮುಕ್ತಗೊಳಿಸಿ ದೈಹಿಕ ಚಟುವಟಿಕೆಗಳಿಗೆ ಪ್ರೇರೇಪಿಸಲು ಮೈದಾನ ಅತ್ಯವಶ್ಯಕ.ಇಂತಹ ಒಂದು ಮೈದಾನ‌ವನ್ನು ಅಚ್ಚುಕಟ್ಟಾಗಿ ರೂಪಿಸುವಲ್ಲಿ ಬಳಗದ ಚಿಂತನೆ, ಪರಿಶ್ರಮ ಹಾಗೂ ದಾನಿಗಳ ಸಹಕಾರ ಇತರರಿಗೆ ಮಾದರಿಯಾಗಬೇಕಿದೆ ಎಂದು ಪ್ರಶಂಸಿಸಿದರು.

ಗೆಳೆಯರ ಬಳಗದ ಪ್ರಮುಖರಾದ, ಕೂಡುಮಂಗಳೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಸಿ.ಸಿ.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಕಾರದ ಯಾವುದೇ ಅನುದಾನ ಪಡೆಯದೆ ಗ್ರಾಮದಲ್ಲಿ ಜನರಿಗೆ ಅನುಕೂಲವಾಗುವ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದೆಯೂ ಹತ್ತ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.

ದಾನಿ ಅಜಿತ್‌ ಮುತ್ತಪ್ಪ ಮಾತನಾಡಿ ಬಳಗದ ಪ್ರಯತ್ನಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಚಂದ್ರಶೇಖರ್, ಯೋಗೇಶ್ ಗೌಡ, ಮಂಜುಳಾ, ಶ್ರೀನಿವಾಸ್ ಸಿ.ಎ, ರಾಮೇಗೌಡ ಎನ್, ಅತ್ತೂರು ಗ್ರಾಮದ ಮಧುಕುಮಾರ್, ಕೃಷ್ಣೇಗೌಡ, ಶ್ರೀನಿವಾಸ್ ಸಿ.ಸಿ, ದಾನಿಗಳಾದ ಮಧುಕುಮಾರ್, ಲೀಜುಶಶಿ, ಜಿ.ಬಿ.ರತ್ನಾಕರ, ಅರ್ಚಕರಾದ ಉದಯಕುಮಾರ್ ಮತ್ತಿತರರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!