ಕುಶಾಲನಗರ, ಅ 31: ಸಾಮರಸ್ಯ ವೇದಿಕೆಯ ವತಿಯಿಂದ ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲ್ಮೀಕಿ ಸಮಾಜದ ಮುಖಂಡರು, ಕೃಷಿಕರು ಹಾಗೂ ಆಟೋ ಚಾಲಕರಾದ ರವಿ ಬಸವನಹಳ್ಳಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಕುಶಾಲನಗರದ ಸರಸ್ವತಿ ಡಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಅವರು, ಮಹರ್ಷಿ ವಾಲ್ಮೀಕಿಯವರು ತಮ್ಮ ರಾಮಾಯಣದ ಮೂಲಕ ಸಮಾಜದ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಶ್ರೀರಾಮನಲ್ಲಿರುವ ಆದರ್ಶ ಗುಣಗಳನ್ನು ಜಗತ್ತಿಗೆ ಪರಿಚಯಿಸಿ, ಆ ಗುಣಗಳು ಇಂದಿಗೂ ಜನಮಾನಸದಲ್ಲಿ ಆರಾಧಿಸಲ್ಪಡುವಂತೆ ಮಾಡಿದ ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ. ಇಂದಿನ ಸಮಾಜವು ರಾಮಾಯಣವನ್ನು ಕೇವಲ ಧಾರ್ಮಿಕ ಗ್ರಂಥವಾಗಿ ನೋಡದೆ, ವೈಜ್ಞಾನಿಕ ಹಾಗೂ ಸಾಮಾಜಿಕ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ತಾಲೂಕು ಸಂಘಚಾಲಕರಾದ ಡಾ. ಉದಯ್ ಕುಮಾರ್ ಅವರು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ಆರೋಗ್ಯ ಕಾರ್ಡ್ ಹಾಗೂ ಆರೋಗ್ಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅರ್ಹ ಫಲಾನುಭವಿಗಳು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಸಾಮರಸ್ಯ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಯೋಜಕರಾದ ಹರೀಶ್ ತಮ್ಮಯ್ಯ ಅವರು, ಕೊಡಗು ಜಿಲ್ಲೆಯಲ್ಲಿ ಸಾಮರಸ್ಯ ವೇದಿಕೆಯ ವತಿಯಿಂದ ನಡೆಯುತ್ತಿರುವ ವಿವಿಧ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರ ಪರಿಚಯ ಹಾಗೂ ಸ್ವಾಗತವನ್ನು ರಜನಿಕಾಂತ್ ಎಂ.ಜೆ. ನೆರವೇರಿಸಿದರು. ಸಾಮರಸ್ಯ ಗೀತೆಯನ್ನು ದರ್ಶನ್ ಕುಶಾಲನಗರ ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಾಮರಸ್ಯ ಜಿಲ್ಲಾ ಸಹ ಸಂಯೋಜಕರಾದ ದೇವಿ ಪ್ರಸಾದ್ ಕುಶಾಲನಗರ ನಡೆಸಿಕೊಟ್ಟರು. ಜಿಲ್ಲಾ ಸಹ ಸಂಯೋಜಕರಾದ ಶ್ರೀಮತಿ ಲೀಲಾ ಮೇದಪ್ಪ ವಂದನಾರ್ಪಣೆ ಸಲ್ಲಿಸಿದರು. ಮಹೇಶ್ ಅಮೀನ್ ಅವರು ವಂದೇ ಮಾತರಂ ಗೀತೆಯನ್ನು ಹಾಡಿದರು.
ಸಾಮರಸ್ಯ ವೇದಿಕೆಯ ಕುಶಾಲನಗರ ತಾಲೂಕು ಸಂಯೋಜಕರಾದ ರವಿ ಮತ್ತು ಸದಾಶಿವ ಸೇರಿದಂತೆ ಕುಶಾಲನಗರ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ಸಮುದಾಯದ ಪ್ರಮುಖರು, ಸಾರ್ವಜನಿಕರು ಹಾಗೂ ಮಾತೆಯರು ಉಪಸ್ಥಿತರಿದ್ದರು.
Back to top button
error: Content is protected !!