ಮನವಿ

ಕನ್ನಡ ರಾಜ್ಯೋತ್ಸವದಂದು ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಲು ಡಿಆರ್‌ಸಿ ಚಿತ್ರಮಂದಿರದ ಒಪ್ಪಿಗೆ

ಕುಶಾಲನಗರ, ಅ 28 ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಆನಂದ್ ಕನ್ನಡಿಗ, ಕುಶಾಲನಗರ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ಹಾಗೂ ಕುಶಾಲನಗರ ನಗರಾಧ್ಯಕ್ಷರಾದ ಯೋಗೇಶ್ ಗೌಡ ಅವರ ನೇತೃತ್ವದಲ್ಲಿ ಇಂದು ಕುಶಾಲನಗರದ ಡಿಆರ್‌ಸಿ ಚಿತ್ರಮಂದಿರದ ವ್ಯವಸ್ಥಾಪಕರನ್ನು ಭೇಟಿ ಮಾಡಿ, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವಂತೆ ಮನವಿ ಸಲ್ಲಿಸಲಾಯಿತು.

ಕನ್ನಡ ರಾಜ್ಯೋತ್ಸವವು ಕನ್ನಡಿಗರ ಹೆಮ್ಮೆಯ ಹಬ್ಬವಾಗಿದ್ದು, ಈ ವಿಶೇಷ ದಿನದಂದು ಕನ್ನಡ ಭಾಷೆ, ನಾಡು-ನುಡಿ ಹಾಗೂ ಕನ್ನಡ ಚಿತ್ರರಂಗಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅನ್ಯಭಾಷೆಯ ಚಿತ್ರಗಳನ್ನು ಪ್ರದರ್ಶಿಸದೆ ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮನವಿ ಮಾಡಿದರು.

ಕರವೇಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿಆರ್‌ಸಿ ಚಿತ್ರಮಂದಿರದ ವ್ಯವಸ್ಥಾಪಕರು, ಕನ್ನಡ ನಾಡು-ನುಡಿಗೆ ಗೌರವ ನೀಡುವುದಾಗಿ ತಿಳಿಸಿ, ಕನ್ನಡ ರಾಜ್ಯೋತ್ಸವದಂದು ಅನ್ಯಭಾಷೆಯ ಚಿತ್ರಗಳನ್ನು ಪ್ರದರ್ಶಿಸದೆ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವುದಾಗಿ ಒಪ್ಪಿಗೆ ಸೂಚಿಸಿದರು. ಅಲ್ಲದೆ, ಕನ್ನಡ ನಾಡು-ನುಡಿಯ ವೈಶಿಷ್ಟ್ಯವನ್ನು ಗೌರವಿಸುವುದರ ಜೊತೆಗೆ ಕನ್ನಡ ಚಿತ್ರರಂಗದ ಉಳಿವು ಮತ್ತು ಬೆಳವಣಿಗೆಗೆ ತಮ್ಮ ಕಡೆಯಿಂದಲೂ ಸಕಾರಾತ್ಮಕ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಆನಂದ್ ಕನ್ನಡಿಗ, ಕುಶಾಲನಗರ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ, ನಗರಾಧ್ಯಕ್ಷರಾದ ಯೋಗೇಶ್ ಗೌಡ, ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಜೈಸ್ವಾಮಿ, ನಗರ ಉಪಾಧ್ಯಕ್ಷರಾದ ರವಿ, ಹೇಮಂತ್, ನಾಗರತ್ನ, ರಮೇಶ್, ಮಂಜು, ಕೋಟಿ, ಹರೀಶ್, ಯೋಗೇಶ್ ಹಾಗೂ ವೀರಭದ್ರ ಸೇರಿದಂತೆ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!