ಕುಶಾಲನಗರ, ಅ 26: ನನ್ನ ವಿರುದ್ಧ ನಾಳೆ ನಡೆಯಲಿರುವ ಪ್ರತಿಭಟನೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ನನ್ನ ಮೇಲೆ ಅನಗತ್ಯ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಕೂಡುಮಂಗಳೂರು ಗ್ರಾಪಂ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಶಾಲೆಯ ಜಾಗವನ್ನು ಅತಿಕ್ರಮಣ ಮಾಡಿರುವುದು ನಿಜವಾಗಿದ್ದರೆ, ಶಾಲೆಯ ಬೇಲಿಯನ್ನು ಧ್ವಂಸಗೊಳಿಸಿದವರ ವಿರುದ್ಧ ಶಾಲೆಯ ಮುಖ್ಯ ಶಿಕ್ಷಕರು ಪೊಲೀಸ್ ದೂರು ದಾಖಲಿಸಿರುವುದೇಕೆ? ಗ್ರಾಮಸ್ಥರ ಸಮ್ಮುಖದಲ್ಲಿಯೇ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಶಾಲೆಯ ಯಾವುದೇ ಜಾಗ ಅತಿಕ್ರಮಣವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ಸ್ವತಃ ಮುಖ್ಯ ಶಿಕ್ಷಕರು ವಿಪಿ ಶಶಿಧರ್ ಅವರಿಗೂ ತಿಳಿಸಿದ್ದಾರೆ,
ನನ್ನ ಸ್ವಂತ ಜಾಗದ ಒಳಭಾಗದಲ್ಲಿ ಸ್ವಲ್ಪ ಪೈಸಾರಿ ಜಾಗವಿದೆ ಎಂಬ ಕಾರಣಕ್ಕೆ, ನಾನು ಬೇರೆ ಪಂಚಾಯಿತಿ ವ್ಯಾಪ್ತಿಯಿಂದ ಬಂದವನು ಎಂದು ಹೇಳಿ ಆ ಜಾಗವನ್ನು ಶಾಲೆಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸುವುದು ಎಷ್ಟು ಸರಿ? ನಿಜವಾಗಿಯೂ ಶಾಲೆಯ ಬಗ್ಗೆ ಮತ್ತು ಗ್ರಾಮದ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ, ನಮ್ಮ ಜಾಗದ ಸುತ್ತಮುತ್ತಲಿನ ಪೈಸಾರಿ ಜಾಗದಲ್ಲಿ ಕೃಷಿ ಮಾಡುತ್ತಿರುವ ಇತರರ ಜಾಗದ ಬಗ್ಗೆಯೂ ಧ್ವನಿ ಎತ್ತಲಿ.
ಅಷ್ಟೇ ಅಲ್ಲದೆ, ತಮ್ಮ ಬೆಂಬಲಿಗರೆಂದು ಹೇಳಲಾಗುವ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಸುಮಾರು ಒಂದೂವರೆ ಎಕರೆ ಪೈಸಾರಿ ಜಾಗವನ್ನು ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡಿರುವ ಆರೋಪದ ಬಗ್ಗೆಯೂ ತನಿಖೆ ನಡೆಸಿ, ಅತಿಕ್ರಮಣ ಸಾಬೀತಾದರೆ ಆ ಜಾಗವನ್ನು ಸರ್ಕಾರದ ವಶಕ್ಕೆ ಪಡೆದು ಸಾರ್ವಜನಿಕ ಉದ್ದೇಶಗಳಿಗೆ ಬಳಸುವಂತೆ ಒತ್ತಾಯಿಸಲಿ.
ಆಯ್ದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ರಾಜಕೀಯ ದ್ವೇಷ ಸಾಧಿಸುವ ಬದಲು, ಎಲ್ಲ ಅತಿಕ್ರಮಣಗಳ ಬಗ್ಗೆಯೂ ಸಮಾನವಾಗಿ ಧ್ವನಿ ಎತ್ತಬೇಕು. ರಾಜಕೀಯ ಪ್ರೇರಿತ ಪ್ರತಿಭಟನೆಗಳು ಹಾಗೂ ಬೆದರಿಕೆಗಳಿಗೆ ನಾನು ಹೆದರುವವನಲ್ಲ. ನನ್ನ ವಿರುದ್ಧದ ಆರೋಪಗಳಿಗೆ ಕಾನೂನುಬದ್ಧವಾಗಿ ಉತ್ತರಿಸಲು ಮತ್ತು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಲು ನಾನು ಸಿದ್ಧನಿದ್ದೇನೆ ಎಂದು ಭಾಸ್ಕರ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ನನ್ನ ವಿರುದ್ಧ ಯಾರೇ ಪ್ರತಿಭಟನೆ ನಡೆಸಿದರೂ, ನನ್ನ ಬಳಿ ಇರುವ ದಾಖಲೆಗಳು ಮತ್ತು ಸತ್ಯಾಂಶಗಳ ಆಧಾರದ ಮೇಲೆ ಕಾನೂನುಬದ್ಧವಾಗಿ ಉತ್ತರಿಸಲು ನಾನು ಸಿದ್ಧನಿದ್ದೇನೆ. ನ್ಯಾಯದ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರಕಟಣೆ ನೀಡಿದ್ದಾರೆ.
Back to top button
error: Content is protected !!