ಕುಶಾಲನಗರ, ಅ 26 ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಆಡಳಿತ, ಪುರಸಭೆ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಗುಮ್ಮನಕೊಲ್ಲಿಯ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ
ನಮಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಪರಿವರ್ತನೆ ಮತ್ತು ಬದಲಾವಣೆ ಜಗದ ನಿಯಮ. ಹಿನ್ನಲೆ ಏನೇ ಇದ್ದರೂ ಸಮಾಜಕ್ಕೆ ನಮ್ಮ ಅತ್ಯಮೂಲ್ಯ ಕೊಡುಗೆ ಮಾತ್ರ ಪರಿಗಣನೆಗೆ ಬರುತ್ತದೆ. ಇದಕ್ಕೆ ವಾಲ್ಮೀಕಿ ಮಹರ್ಷಿಗಳೇ ಉದಾಹರಣೆ. ನಮ್ಮ ಪರಿಸ್ಥಿತಿ, ಅವ್ಯವಸ್ಥೆಗಳನ್ನು ಬದಿಗಿಟ್ಟು ಸಾಧನೆ ತೋರುವ ಶಕ್ತಿ ನಮ್ಮಲ್ಲಿಯೇ ಅಡಗಿದೆ ಎಂದರು. ಸಮುದಾಯದ ಅಭಿವೃದ್ದಿಗೆ ದೊರಕುವ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಆಸಕ್ತಿ ತೋರಬೇಕಿದೆ ಎಂದರು.
ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಕೊಡಗು ಜಿಲ್ಲೆಯ ಅಧ್ಯಕ್ಷ
ಕೆ.ಎನ್.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಾಯಣ ರಚಿಸಿದ ಮಹಾಋಷಿ ವಾಲ್ಮೀಕಿ ಅವರ ಬಗ್ಗೆ ಯುವ ಪೀಳಿಗೆ ಅರಿತುಕೊಳ್ಳುವ ಅಗತ್ಯವಿದೆ ಎಂದರು.
ವಾಲ್ಮೀಕಿ ಭವನ ಮತ್ತಷ್ಟು ಅಭಿವೃದ್ದಿಯಾದಲ್ಲಿ ಎಲ್ಲಾ ಸಮುದಾಯದವರಿಗೆ ಅನುಕೂಲ ಉಂಟಾಗಲಿದೆ. ಜಿಲ್ಲಾ ವಾಲ್ಮೀಕಿ ಭವನ ಕುಶಾಲನಗರದಲ್ಲಿ ನಿರ್ಮಾಣಗೊಂಡರೆ ಉತ್ತಮ ಎಂದು ಬೇಡಿಕೆಯಿತ್ತರು.
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿದರು.
ಕೊಡಗು ವಿವಿ ಪ್ರಾಧ್ಯಾಪಕ ಡಾ.
ಧರ್ಮಪ್ಪ ಕೆ.ಕೆ.
ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕ ಅಧ್ಯಕ್ಷ ಚಂದನ್ ಕುಮಾರ್, ತಾಲೂಕು ದಂಡಾಧಿಕಾರಿ ಕೆ.ಕೆ. ಕೃಷ್ಣಮೂರ್ತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ಸೋಮವಾರಪೇಟೆ ಯೋಜನಾ ಪ್ರಾಧಿಕಾರ ಅಧ್ಯಕ್ಷ
ಕೆ.ಆದಂ, ಮುಖ್ಯಾಧಿಕಾರಿಗಳಾದ ಗಿರೀಶ್, ಕೃಷ್ಣಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ ಸೇರಿದಂತೆ
ವಿವಿಧ ಸಂಘಟನೆ, ಸಂಘಸಂಸ್ಥೆಗಳ ಪ್ರಮುಖರಾದ ಪ್ರಭಾಕರ್, ಕೆ.ಬಿ.ರಾಜು, ಮಹೇಶ್, ರೆಹನಾ ಸುಲ್ತಾನ್, ನಿರ್ವಾಣಪ್ಪ, ಜೋಯಪ್ಪ ಮತ್ತಿತರರು ಇದ್ದರು.
Back to top button
error: Content is protected !!