ಕುಶಾಲನಗರ: ಕಾವೇರಿ ತಾಯಿಯ ಆಶೀರ್ವಾದದಿಂದ ಕೊಡಗಿನ ನಾಡು ಸದಾ ಸುಭಿಕ್ಷವಾಗಿರಲಿ, ರೈತರ ಬದುಕು ಹಸನಾಗಲಿ ಹಾಗೂ ನಾಡಿನ ಜನರಿಗೆ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ ಎಂಬ ಸಂಕಲ್ಪದೊಂದಿಗೆ, ಕಾವೇರಿ ಸಂಕ್ರಮಣದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸುಂಟಿಕೊಪ್ಪ ಹೋಬಳಿ ಘಟಕದ ವತಿಯಿಂದ ಕುಶಾಲನಗರ ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷರಾದ ದೀಪಕ್ ಕನ್ನಡಿಗ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಆನಂದ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷರಾದ ಪವನ್ ಪಾಂಡುರಂಗ ಅವರು, “ಕಾವೇರಿ ತಾಯಿಯು ಕೊಡಗು ಸೇರಿದಂತೆ ಕರ್ನಾಟಕ ಹಾಗೂ ತಮಿಳುನಾಡಿನ ಜನರ ಜೀವನಾಡಿಯಾಗಿದ್ದಾಳೆ. ಕಾವೇರಿ ನದಿಯ ಸ್ವಚ್ಛತೆ ಹಾಗೂ ಪರಿಸರದ ಸಂರಕ್ಷಣೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಸಮಾಜದ ಧ್ವನಿಯಾಗಿ, ಇತರರಿಗೆ ಮಾದರಿಯಾಗುವ ರೀತಿಯಲ್ಲಿ ನಾವೆಲ್ಲರೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಸಂಘಟನೆಯ ಗೌರವಾಧ್ಯಕ್ಷರಾದ ಮುರುಗೇಶ್ ಅವರು ಮಾತನಾಡಿ, “ಕನ್ನಡ ನಾಡು-ನುಡಿಯ ಹೋರಾಟಗಳ ಜೊತೆಗೆ ಸಂಘಟನೆಯು ವಿವಿಧ ನಾಡಪರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿಯೂ ತಮ್ಮೆಲ್ಲರ ಸಹಕಾರದೊಂದಿಗೆ ಇನ್ನಷ್ಟು ಜನಪರ ಹಾಗೂ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳೋಣ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಅಶ್ವತ್ ಪೂಜಾರಿ, ಸುಂಟಿಕೊಪ್ಪ ನಗರ ಘಟಕದ ಅಧ್ಯಕ್ಷರಾದ ಪ್ರತಾಪ್ ಪೂಜಾರಿ, ನಗರ ಘಟಕದ ಉಪಾಧ್ಯಕ್ಷರಾದ ಹರೀಶ್, ಶ್ರೀಧರ್, ಪಿ. ಶ್ರೀನಿವಾಸ್, ಚಂದ್ರ ಪೂಜಾರಿ, ಪ್ರದೀಪ್, ಶಾರದಾ, ಡೇವಿಡ್, ದಿನಕರ, ಮಿಥುನ್, ಸುನಿಲ್ ಪೂಜಾರಿ ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Back to top button
error: Content is protected !!