ಕುಶಾಲನಗರ, ಸೆ 08: ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಪಂ ವ್ಯಾಪ್ತಿಯ ಸುಂಕದಳ್ಳಿಯ ಪಿಕ್ ಅಪ್ ಕೆರೆಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು ಕೆರೆ ಅಕ್ಕಪಕ್ಕದ ಕೃಷಿಕರು ಆತಂಕದ ನಡುವೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಕೆರೆ ಸಮೀಪದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಸಂದರ್ಭ ನದಿಯಿಂದ ಬಂದ ಬೃಹತ್ ಮೊಸಳೆ ಕೆರೆ ಸೇರಿಕೊಂಡಿದೆ. ಆಗಾಗ್ಯೆ ಕೆರೆದಂಡೆ, ಕಾಲುದಾರಿಯಲ್ಲಿ ಅಡ್ಡಾಡುವ ಮೊಸಳೆ ಕಂಡು ಜನರು ಭಯಭೀತರಾಗಿದ್ದಾರೆ.
ಕೆರೆ ಸುತ್ತಲೂ ಕೃಷಿ ಜಮೀನಿನಲ್ಲಿ ಕೆಲಸ ಮಾಡುವ ಮಹಿಳೆಯರು ಕೂಡ ಮೊಸಳೆ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಸಂಜೆ ಕತ್ರಲಾಗುವವರೆಗೆ ಕೃಷಿ ಕಾರ್ಯವಿರುತ್ತದೆ. ಕತ್ತಲಲ್ಲಿ ಗದ್ದೆಯಲ್ಲಿ ಮೊಸಳೆ ಆತಂಕದಿಂದ ಕೆಲಸ ನಿರ್ವಹಿಸಬೇಕು.ಕೆಲಸ ಮುಗಿಸಿ ಕೆರೆ ಏರಿ ಮೇಲೆ ನಡೆದು ಸಾಗಲು ಕೂಡ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಉಂಟಾಗಿದೆ. ಕೈಕಾಲು ತೊಳೆಯಲು ಕೂಡ ಕೆರೆಗೆ ಇಳಿಯದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಕೃಷಿಕ ಮಹಿಳೆಯರಾದ ಸೌಭಾಗ್ಯ, ಮಲ್ಲಿಕಾ, ವಸಂತಮ್ಮ, ಮಂಜುಳಾ ಎಂಬವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೆರೆಯಲ್ಲಿ ಮೂರು ಮೊಸಳೆಗಳು ಸೇರಿಕೊಂಡಿವೆ.
ಹಸು, ಆಡು, ಕುರಿಗಳನ್ನು ಕರೆತಂದು ನೀರು ಕುಡಿಸಲು ಕೂಡ ಜನರು ಕೆರೆಯತ್ತ ಸುಳಿಯುತ್ತಿಲ್ಲ ಎಂದ ರೈತ ದೇವಯ್ಯ ತಿಳಿಸಿದರು.
ಮತ್ತೊಂದೆಡೆ ಕೆರೆಯನ್ನು ಗುತ್ತಿಗೆ ಪಡೆದ ಸುಂಕದಳ್ಳಿಯ ಪ್ರಸನ್ನ ಎಂಬವರಿಗೆ ಮೊಸಳೆಗಳ ಕಾಟದಿಂದ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕೆರೆಯನ್ನು ವಾರ್ಷಿಕ ಗುತ್ತಿಗೆ ಪಡೆದು 60 ಸಾವಿರ ಮೀನು ಮರಿಗಳನ್ನು ಬಿಟ್ಟಿದ್ದರು. ಆದರೆ ಮೊಸಳೆಗಳು ಮೀನುಗಳನ್ನು ತಿಂದು ಮುಗಿಸುತ್ತಿದೆ. ಮೀನು ಹಿಡಿಯಲು ಜನರು ಹಿಂದೇಟು ಹಾಕುವ ಕಾರಣ ಮೀನು ಹಿಡಿಯಲು ಸಾಧ್ಯವಾಗದೆ ಒಂದೂವರೆ ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ. ಮೊಸಳೆ ಹಿಡಿದು ಸ್ಥಳಾಂತರಿಸಲು ಗ್ರಾಮ ಪಂಚಾಯ್ತಿಗೆ ಹಲವು ಬಾರಿ ಮನವಿ ಮಾಡಿದರೂ ಸಕಾಲದಲ್ಲಿ ಸ್ಪಂದಿಸದೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಪ್ರಸನ್ನ ಅಳಲು ತೋಡಿಕೊಂಡಿದ್ದಾರೆ. ಜೀವಹಾನಿ ಉಂಟಾಗುವ ಮುನ್ನ ಸಂಬಂಧಿಸಿದವರು ಮೊಸಳೆ ಹಿಡಿಯಲು ಕ್ರಮಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.
Back to top button
error: Content is protected !!