ಕುಶಾಲನಗರ, ಜು 09: ಕೊಡಗು ಜಿಲ್ಲೆ, ಕುಶಾಲನಗರ ತಾಲ್ಲೂಕಿನ ರಂಗಸಮುದ್ರ ಗ್ರಾಮದ ಚಿಕ್ಲಿಹೊಳೆ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ತುರ್ತು ದುರಸ್ತಿ ಹಾಗೂ ಹೂಳು ಎತ್ತುವ ಕಾಮಗಾರಿ ಕೈಗೊಳ್ಳಲು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಗೆ ಪತ್ರ ವ್ಯವಹಾರ ನಡೆಸಿದ್ದಾರೆ.
ಚಿಕ್ಲಿಹೊಳೆ ಜಲಾಶಯದ ಎಡದಂಡೆ ಹಾಗೂ ಬಲದಂಡೆ ನಾಲೆಗಳು ದೀರ್ಘಕಾಲದಿಂದ ಹೂಳು ತುಂಬಿಕೊಂಡು ತೀವ್ರವಾಗಿ ಶಿಥಿಲಗೊಂಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.
ನಾಲೆಗಳು ಹೂಳು ಮತ್ತು ಸಸ್ಯವರ್ಗದಿಂದ ಮುಚ್ಚಿಹೋಗಿರುವುದರಿಂದ ಜಲಾಶಯದಿಂದ ಬಿಡಲಾಗುವ ನೀರು ನಾಲೆಯ ಕೊನೆಯ ಭಾಗದ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ತಲುಪುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದ್ದು, ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ರೈತರ ಹಿತದೃಷ್ಟಿಯಿಂದ ನಾಲೆಗಳ ಪುನಶ್ಚೇತನ ಅತ್ಯಂತ ತುರ್ತಾಗಿ ಆಗಬೇಕಿದೆ. ಆದ್ದರಿಂದ. ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಚಿಕ್ಲಿಹೊಳೆ ಜಲಾಶಯದ ಉಭಯ ನಾಲೆಗಳ ಹೂಳು ತೆಗೆಯಲು ಮತ್ತು ಶಿಥಿಲಗೊಂಡಿರುವ ಭಾಗಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ಸದರಿ ಪ್ರಕರಣದ ಕುರಿತು ಕೈಗೊಂಡ ಕ್ರಮದ ಬಗ್ಗೆ ಈ ಕಛೇರಿಗೆ ಮಾಹಿತಿ ಸಲ್ಲಿಸಲು ಅವರು ಪತ್ರದ ಮೂಲಕ ಸೂಚಿಸಿದ್ದಾರೆ. ಚಿಕ್ಲಿಹೊಳೆ ಅವ್ಯವಸ್ಥೆ ಹಾಗೂ ನೀರಾವರಿ ನಿಗಮದ ನಿರ್ಲಕ್ಷ್ಯದ ಕುರಿತು ನಂಜರಾಯಪಟ್ಟಣ ಹಾಗೂ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ರೈತರ ಪರವಾಗಿ ಕೊಡಗು ಬಿಜೆಪಿ ಉಪಾಧ್ಯಕ್ಷ ಆರ್.ಕೆ.ಚಂದ್ರ ಅವರು ಸಂಸದರ ಗಮನ ಸೆಳೆದಿದ್ದರು.
Back to top button
error: Content is protected !!