ಕುಶಾಲನಗರ, ಜೂ 12:ಮಾದಾಪಟ್ಟಣ ಅಂಗನವಾಡಿ ಕೇಂದ್ರ-1 ಕ್ಕೆ ಕಾಯಂ ಶಿಕ್ಷಕರನ್ನು ನೇಮಿಸದೆ ಅಂಗನವಾಡಿ ಮುಚ್ಚಲ್ಪಟ್ಟಿದೆ. ಇದರಿಂದ ಸ್ಥಳೀಯ ಮಕ್ಕಳಿಗೆ ತೀವ್ರ ಅನಾನುಕೂಲ ಎದುರಾಗಿದೆ ಎಂದು ಇಲಾಖೆಯ ಅವ್ಯವಸ್ಥೆ ಖಂಡಿಸಿ ಪೋಷಕರು ಪ್ರತಿಭಟಿಸಿದರು.
ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕಾದ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ತಾತ್ಸಾರ ತೋರುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 12 ವರ್ಷಗಳಿಂದ ಈ ಕೇಂದ್ರಕ್ಕೆ ಖಾಯಂ ಶಿಕ್ಷಕರಿಲ್ಲ. ತಾತ್ಕಾಲಿಕವಾಗಿ ಬರುವ ಶಿಕ್ಷಕರು ಅಲ್ಪ ಅವಧಿಯಲ್ಲಿಯೇ ಕೇಂದ್ರವನ್ನು ತೊರೆಯುತ್ತಿದ್ದಾರೆ. ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇದೇ ಗ್ರಾಮದ ಯುವತಿ ಮದುವೆಯಾಗಿ ಹೊರ ಜಿಲ್ಲೆಗೆ ತೆರಳಿದ್ದಾರೆ. ಇದರಿಂದ ಅಂಗನವಾಡಿ
ಕಳೆದರೆಡು ವರ್ಷಗಳಿಂದ ನಿರಂತರವಾಗಿ ಬೀಗ ಜಡಿದ ಸ್ಥಿತಿಯಲ್ಲಿಯೇ ಇದೆ. ಮಕ್ಕಳ ಭವಿಷ್ಯ ಗಮನಿಸಿ ಕಳೆದೆರೆಡು ತಿಂಗಳ ಹಿಂದೆ ಅಂಗನವಾಡಿ ಬಾಗಿಲು ತೆರೆಸಿ ಮಕ್ಕಳ ಕಲಿಕೆಗೆ ಅವಕಾಶ ಒದಗಿಸಿಕೊಡಲಾಗಿತ್ತು. ಗ್ರಾಪಂ ಮೂಲಕ ಅಂಗನವಾಡಿಯ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವ ಭರವಸೆ ಕೂಡ ದೊರೆತಿದೆ. ಆದರೆ ಶಿಕ್ಷಕರೇ ಇಲ್ಲದ ಕಾರಣ ಅಂಗನವಾಡಿಗೆ ಬೀಗ ಜಡಿಯುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಶಾಸಕರಾದಿಯಾಗಿ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಾವುದೇ ಅಗತ್ಯ ಕ್ರಮಕೈಗೊಳ್ಳದೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯ ದಲಿತ ಸಂಘರ್ಷ ಸಮಿತಿ ಮುಖಂಡ ಹೆಚ್.ಜೆ.ದಾಮೋದರ ಅವರು ಆರೋಪಿಸಿದ್ದಾರೆ.
ಮದುವೆಯಾಗಿ ಹೊರ ಜಿಲ್ಲೆಗೆ ತೆರಳಿರುವ ಶಿಕ್ಷಕಿಯನ್ನು ಕೈಬಿಟ್ಟು
ಶಿಕ್ಷಕಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಎದುರು ನೋಡುತ್ತಿರುವ ಇದೇ ಗ್ರಾಮದ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ ಅಂಗನವಾಡಿ ಶಿಕ್ಷಕಿಯಾಗಿ ನೇಮಿಸಬೇಕಿದೆ ಎಂದು ಅವರು ಆಗ್ರಹಿಸಿದರು.
ತಪ್ಪಿದಲ್ಲಿ ಸಮಿತಿ ಮೂಲಕ ಪೋಷಕರ ಸಹಕಾರದೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಸ್ಥಳೀಯ ಮುಖಂಡರ ಶ್ರಮದಿಂದ
ಕಳೆದ ಎರಡು ತಿಂಗಳ ಹಿಂದೆ ಅಂಗನವಾಡಿ ತೆರೆದು ಮಕ್ಕಳಿಗೆ ಅನುಕೂಲ ಒದಗಿಸಲಾಗಿತ್ತು. ಒಂದೇ ತಿಂಗಳಿಗೆ ಮತ್ತೆ ಬೀಗ ಜಡಿಯುವ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ
ಈ ಅಂಗನವಾಡಿ ವ್ಯಾಪ್ತಿಯಲ್ಲಿ 20 ಕ್ಕೂ ಅಧಿಕ ಮಕ್ಕಳು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಸಮಸ್ಯೆ ಬಗೆಹರಿಸಲು ಕೋರಿ ಅಧಿಕಾರಿಯನ್ನು ಸಂಪರ್ಕಿಸಿದರೆ ಉಡಾಫೆಯಿಂದ ಪ್ರತಿಕ್ರಿಯಿಸುತ್ತಾರೆ ಎಂದು ಮಹಿಳೆ ಶಶಿಕಲಾ ಆರೋಪಿಸಿದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಖಾಯಂ ಶಿಕ್ಷಕರನ್ನು ನೇಮಿಸಿ ಅಂಗನವಾಡಿ ಪ್ರಾರಂಭಿಸಲು ಕ್ರಮಕೈಗೊಳ್ಳುವಂತೆ ಪೋಷಕರುಗಳು ಆಗ್ರಹಿಸಿದ್ದಾರೆ.
ಈ ಸಂದರ್ಭ ಪೋಷಕರಾದ
ಸಾಕಮ್ಮ, ಮೀನಾ, ಭಾಗ್ಯ, ಖೈರುನ್ನಿಸಾ, ಕಾವ್ಯ, ರೀತಾ, ಗೌರಿ,
ಅಮೀನಾ, ದೇವರಾಜ್, ಚಂದ್ರ
ನಾಗಮ್ಮ ಇದ್ದರು.
Back to top button
error: Content is protected !!