ಕುಶಾಲನಗರ, ಜೂ 12: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಕುಟ್ಟನಹಳ್ಳ ಭಾಗದ 10ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದವು. ಸುಮಾರು ನಾಲ್ಕು ದಶಕಗಳ ಕಾಲ ಮೂಲಭೂತ ಸೌಲಭ್ಯವಾದ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಗ್ರಾಮಸ್ಥರಿಗೆ ಇದೀಗ ಶಾಶ್ವತ ಪರಿಹಾರ ದೊರೆತಿದೆ. ಇಲ್ಲಿನ ಕಾಂತಂಡ ಕುಟುಂಬಸ್ಥರು ಚಿಕ್ಲಿಹೊಳೆ ನಾಲೆ ನೀರನ್ನು ಕುಡಿದು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದರು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ಗ್ರಾಪಂ ಮಾಜಿ ಸದಸ್ಯ, ಬಿಜೆಪಿ ಉಪಾಧ್ಯಕ್ಷರು ಹಾಗೂ ದಿಶಾ ಸಮಿತಿ ಸದಸ್ಯರಾದ ಆರ್. ಕೆ. ಚಂದ್ರ ಅವರ ಸತತ ಪ್ರಯತ್ನಕ್ಕೆ ಸ್ಪಂದಿಸಿದ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ತಕ್ಷಣವೇ ರೂ 5 ಲಕ್ಷ ಅನುದಾನ ಮಂಜೂರು ಮಾಡಿದರು.
ಅನುದಾನ ಬಿಡುಗಡೆಯಾದ ಬಳಿಕ ಕೇವಲ ಒಂದು ತಿಂಗಳೊಳಗಾಗಿ ಸುಮಾರು 1.5 ಕಿಲೋಮೀಟರ್ ಉದ್ದದ ಪೈಪ್ಲೈನ್ ಅಳವಡಿಸಿ ಕಟ್ಟೆಹಾಡಿಯಿಂದ ಕುಟ್ಟನಹಳ್ಳ ಭಾಗದ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಹಲವು ವರ್ಷಗಳಿಂದ ಕಾಡುತ್ತಿದ್ದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದೆ.
ಈ ಕಾರ್ಯದಿಂದ ಸಂತೋಷಗೊಂಡ ಗ್ರಾಮಸ್ಥರು ಸ್ಥಳೀಯ ಬಿಜೆಪಿ ಉಪಾಧ್ಯಕ್ಷರು ಹಾಗೂ ದಿಶಾ ಸಮಿತಿ ಸದಸ್ಯರಾದ ಆರ್. ಕೆ. ಚಂದ್ರ, ಲೋಕಸಭಾ ಸದಸ್ಯ ಯದುವೀರ್ ಒಡೆಯರ್, ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
Back to top button
error: Content is protected !!