ಕುಶಾಲನಗರ, ಜೂ 09:ಕುಶಾಲನಗರ ಪುರಸಭೆ ವ್ಯಾಪ್ತಿಯ ಜನತಾ ಕಾಲನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.
ಒಟ್ಟು ರೂ 26 ಲಕ್ಷ ವೆಚ್ಚದಲ್ಲಿ
ಜನತಾ ಕಾಲನಿಯ ಗಣೇಶ ದೇವಸ್ಥಾನದಿಂದ 6ನೇ ಕ್ರಾಸ್ ತನಕ ಸ್ಲಾಬ್ ಅಳವಡಿಕೆ, 6ನೇ ಕ್ರಾಸ್ ನ ಸಿಸಿ ರಸ್ತೆ, ವಿನಾಯಕ ಮತ್ತು ಮಾರುತಿ ಬಡಾವಣೆಯಲ್ಲಿ ರಸ್ತೆ ಅಭಿವೃದ್ದಿಗೆ ಕಾಮಗಾರಿಗೆ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿಗೂ ಅಧಿಕ ಅನುದಾನ ಒದಗಿಸಲಾಗಿದೆ. ಅತ್ಯಗತ್ಯ ಇರುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಕೊಡಗಿಗೆ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವರಾಗುವ ಆಸೆ ಎಲ್ಲರಿಗೂ ಇರುತ್ತದೆ. ಕೊಡಗಿನ ಸಮಗ್ರ ಅಭಿವೃದ್ಧಿಗೆ ಸಚಿವ ಸ್ಥಾನದ ಅಗತ್ಯವಿದೆ. ಸಂಪುಟಕ್ಕೆ ಅಗತ್ಯವಿರುವ ಲೆಕ್ಕಾಚಾರದ ಪ್ರಕಾರ ಎಲ್ಲವೂ ನಡೆಯಲಿದೆ. ಸಚಿವ ಸ್ಥಾನ ಯಾರಿಗೆ ದೊರೆತರೂ ಸಂತೋಷ.
ಈಗಾಗಲೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭ ಕ್ಷೇತ್ರಕ್ಕೆ 200 ಕೋಟಿಗಳಷ್ಟು ಅನುದಾನ ಒದಗಿಸಿದ್ದಾರೆ. ಅವರ ಸಹಕಾರ ನಮಗೆ ಸದಾ ಇದೆ. ಇನ್ನು ಮುಂದೆಯೂ ನಮಗೆ ಅಗತ್ಯವಿರುವ ಅನುದಾನ ಒದಗಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಆನೆ ಮಾನವ ಸಂಘರ್ಷ ನಿಯಂತ್ರಣ ಸಂಬಂಧ ಎಲ್ಲಾ ರೀತಿಯ ಪರಿಣಾಮಕಾರಿ ಯೋಜನೆಗಳನ್ನು ಈಗಾಗಲೆ ಕಾರ್ಯರೂಪಕ್ಕೆ ತರಲಾಗಿದೆಯಾದರೂ ಕಾಡಾನೆಗಳು ಮತ್ತೊಂದು ಮಾರ್ಗದ ಮೂಲಕ ಹಾನಿ ಉಂಟುಮಾಡುತ್ತಿರುವ ಕಾರಣ ಶಾಶ್ವತ ಪರಿಹಾರ ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಕಾರ್ಯೋನ್ಮುಖರಾಗುವ ಮೂಲಕ ಸಂಭಾವ್ಯ ಜೀವ ಹಾನಿ ತಡೆಗಟ್ಟಲು ಪ್ರಯತ್ನಿಸಬೇಕಿದೆ ಎಂದರು.
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮುಳ್ಳುಸೋಗೆ ಗ್ರಾಪಂ ಕುಶಾಲನಗರ ಪುರಸಭೆಗೆ ವಿಲೀನಗೊಂಡ ಬಳಿಕ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪಕ್ಕೆ ವಿರುದ್ದವಾಗಿ ಗೊಂದಿಬಸವನಹಳ್ಳಿ ಮತ್ತು ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.
ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಪುರಸಭೆ ಮಾಜಿ ಸದಸ್ಯ ವಿ.ಜೆ.ನವೀನ್ ಗೌಡ, ವಿ.ಎಸ್.ಆನಂದಕುಮಾರ್, ಗ್ರಾಪಂ ಮಾಜಿ ಸದಸ್ಯ ಮಣಿ ಸೇರಿದಂತೆ ಪ್ರಮುಖರಾದ ರಂಜನ್, ಆದಂ, ಗಯಾಜ್, ಆನಂದ್ ಸೇರಿದಂತೆ ಬಡಾವಣೆ ನಿವಾಸಿಗಳು ಇದ್ದರು.
Back to top button
error: Content is protected !!