ಕುಶಾಲನಗರ, ಜ 21: ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆ, ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ, ಲಾಟರಿ ದಂಧೆ ನಿಷೇಧ ಮತ್ತು ಅಕ್ರಮ ವಲಸಿಗರಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳು ಮಡಿಕೇರಿಗೆ ತೆರಳಿ ಜಿಲ್ಲಾಧಿಕಾರಿ ಕಛೇರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಲಾಟರಿ ನಿಷೇಧವಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ಕೊಡಗಿನ ಬಹುತೇಕ ಕಡೆಗಳಲ್ಲಿ ಪಕ್ಕದ ಕೇರಳ ರಾಜ್ಯದ ಲಾಟರಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಂಡು ಲಾಟರಿ ದಂಧೆಯನ್ನು ನಿಲ್ಲಿಸಬೇಕಿದೆ.
ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಬೆಂಗಳೂರು
ಸೇರಿದಂತೆ ರಾಜ್ಯದ ಹಲವೆಡೆ ಹಲವು ಬಾಂಗ್ಲಾದೇಶಿಗರು ಅಕ್ರಮವಾಗಿ ನೆಲೆಸಿರುವುದು ಬಹಿರಂಗವಾಗುತ್ತಿದೆ. ಇವರಿಗೆ ಕೆಲವು ವ್ಯಕ್ತಿಗಳು ಅಕ್ರಮವಾಗಿ ಆಧಾರ್ ಕಾರ್ಡ್ ಮತ್ತು ಮತದಾರರ ಚೀಟಿಯನ್ನು ಸಹಾ ಮಾಡಿ ಕೊಟ್ಟಿದ್ದಾರೆ, ಕೊಡಗಿನಲ್ಲೂ ಹಲವು ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಇದೇ ರೀತಿ ಬಾಂಗ್ಲಾ ದೇಶಿಗರು ಅಕ್ರಮವಾಗಿ ನೆಲೆಸಿರುವ ಸಾದ್ಯತೆ ಇದೆ. ಇವರಿಂದ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇದ್ದು, ತಾವುಗಳು ತಮ್ಮ ಇಲಾಖೆಯಿಂದ ಸೂಕ್ತ ಪರಿಶೀಲನೆ ನಡೆಸಿ, ಈ ಅಕ್ರಮ ವಾಸಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಲ್ಲದೆ ಇವರಿಗೆ ಅಕ್ರಮವಾಗಿ ದಾಖಲೆಗಳನ್ನು ಮಾಡಿಕೊಡುವಂತಹ ವ್ಯಕ್ತಿಗಳ ವಿರುದ್ಧ ದೇಶದ್ರೋಹದ ಕಾನೂನಿನಡಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ರಾಜ್ಯ ಸರ್ಕಾರ ನಾಮ ಫಲಕಗಳಲ್ಲಿ ಶೇಕಡ 60 ಭಾಗದಷ್ಟು ಕನ್ನಡವನ್ನು ಬಳಸಬೇಕೆಂದು ಆದೇಶ ಹೊರಡಿಸಿ ಒಂದು ವರ್ಷ ಕಳೆದಿರುತ್ತದೆ. ಜಿಲ್ಲೆಯಲ್ಲಿ ಹೋಂಸ್ಟೇ ರೆಸಾರ್ಟ್ ಮತ್ತು ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ನಾಮಕಾವಸ್ಥೆಗೆ ಚಿಕ್ಕದಾಗಿ ಬಳಸಿ, ಆಂಗ್ಲಭಾಷೆಯನ್ನು ದೊಡ್ಡದಾಗಿ ಬಳಸುತ್ತಿದ್ದಾರೆ. ದಿನಾಂಕ 22/12/2025 ರಂದು ಈ ಹಿಂದೆ ಇದ್ದಂತ ಜಿಲ್ಲಾಧಿಕಾರಿಗಳಿಗೆ ಕನ್ನಡ ನಾಮ ಫಲಕದ ಬಗ್ಗೆ ನಮ್ಮ ಸಂಘಟನೆಯಿಂದ ಮನವಿ ಸಲ್ಲಿಸಿದ್ದೇವೆ. ಮನವಿ ಸಲ್ಲಿಸಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಒತ್ತಾಯಿಸಲಾಯಿತು. ಕುಶಾಲನಗರ ತಾಲ್ಲೂಕಿನ ಗೊಂದಿಬಸವನಹಳ್ಳಿ ಹಾಗೂ ಗುಮ್ಮನಕೊಲ್ಲಿ
ಗ್ರಾಮಗಳಲ್ಲಿ ಈ ಹಿಂದೆ ಕಲ್ಲು ಗಣಿಗಾರಿಕೆಗಳು ನಡೆಯುತ್ತಿದ್ದವು. ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಅದನ್ನು ರದ್ದುಗೊಳಿಸಲಾಗಿತ್ತು. ಮತ್ತೆ ಕೆಲವರು ಗಣಿಗಾರಿಕೆಗೆ ಅವಕಾಶ ನೀಡಬೇಕೆಂದು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿರುತ್ತಾರೆ. ಈ ವಿಷಯ ಊರಿನ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಹಲವು ಗ್ರಾಮಸ್ಥರು ನಮ್ಮ ಸಂಘಟನೆಗೆ ಈ ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿರುತ್ತಾರೆ. ಆದುದರಿಂದ ತಾವು ಯಾವುದೇ ಕಾರಣಕ್ಕೂ ಈ ಗ್ರಾಮಗಳಲ್ಲಿ ಮತ್ತೆ ಗಣಿಗಾರಿಕೆಗಳಿಗೆ ಅವಕಾಶ ನೀಡದಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ತಿಳಿಸಿದರು. ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್, ನಗರಾಧ್ಯಕ್ಷ ಮಣಿಕಂಠ, ಮಡಿಕೇರಿ ತಾಲೂಕು ಅಧ್ಯಕ್ಷ ಅರುಣ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಅನಿಲ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಪ್ರಮುಖರಾದ ಭಾವಾ ಮಾಲ್ದಾರೆ, ನಿರ್ಮಲ, ಸರಳ, ಪ್ರವೀಣ್ ಮತ್ತಿತರರು ಇದ್ದರು.
Back to top button
error: Content is protected !!