ಆರೋಗ್ಯ

ಕೂಡಿಗೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

ಕುಶಾಲನಗರ: ಕೂಡಿಗೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರೋಟರಿ ವತಿಯಿಂದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ರೋಟರಿ ಕುಶಾಲನಗರ ಕ್ಲಬ್ ಅಧ್ಯಕ್ಷ ಮನು ಪೆಮ್ಮಯ್ಯ ಅವರು ಮಗುವಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಲ್ಸ್ ಪೋಲಿಯೋವನ್ನು ಜಗತ್ತಿನಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ರೋಟರಿ ಇಂಟರ್‌ನ್ಯಾಷನಲ್‌ನ ಪ್ರಮುಖ ಗುರಿಯಾಗಿದೆ. 1985ರಿಂದ ರೋಟರಿ ಸಂಸ್ಥೆ ಈ ದಿಕ್ಕಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಪ್ರತಿವರ್ಷ ಕುಶಾಲನಗರ ಹಾಗೂ ಸುತ್ತಮುತ್ತಲಿನ ಎಲ್ಲಾ ಸಾರ್ವಜನಿಕ ಸ್ಥಳಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಪೋಲಿಯೋ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಭಾರತವು ಸಂಪೂರ್ಣವಾಗಿ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಪಕ್ಕದ ಕೆಲವು ದೇಶಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡುಬರುತ್ತಿವೆ. ಇದರಿಂದ ಯಾರೂ ನಿರ್ಲಕ್ಷ್ಯ ವಹಿಸಬಾರದು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಭವಿಷ್ಯದ ಅಂಗವೈಕಲ್ಯದಿಂದ ಅವರನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.

ರೋಟರಿ ಸದಸ್ಯ ಡಾ. ಹರಿ ಶೆಟ್ಟಿ ಮಾತನಾಡಿ, 2014ರಲ್ಲಿ ಭಾರತವನ್ನು ಅಧಿಕೃತವಾಗಿ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಲಾಗಿದೆ. ಆದರೆ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡುಬರುತ್ತಿರುವುದರಿಂದ ಎಚ್ಚರಿಕೆ ಅಗತ್ಯವಿದೆ. ಪಕ್ಕದ ದೇಶಗಳಲ್ಲಿ ನಿರ್ಲಕ್ಷ್ಯವಾದರೆ ನಮ್ಮ ದೇಶಕ್ಕೂ ಅಪಾಯ ಉಂಟಾಗಬಹುದು. ಎಲ್ಲರೂ ಲಸಿಕೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ್, ರೋಟರಿ ಕಾರ್ಯದರ್ಶಿ ಮಂಜುನಾಥ್ ಎಚ್.ಪಿ., ಆರೋಗ್ಯಾಧಿಕಾರಿ ಡಾ. ದೀಪಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರೋಟರಿ ಕುಶಾಲನಗರ ಕ್ಲಬ್ ವತಿಯಿಂದ ಲಸಿಕೆ ಅಭಿಯಾನದಲ್ಲಿ ತೊಡಗಿದ್ದ 100ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಕ್ಯಾಪ್‌ಗಳನ್ನು ವಿತರಿಸಲಾಯಿತು. ಮೂರು ದಿನಗಳ ಕಾಲ ಈ ಲಸಿಕೆ ಅಭಿಯಾನ ನಡೆಯಲಿದ್ದು, ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅಮ್ಮ ಕ್ಲಿನಿಕ್, ಕುಶಾಲನಗರ ಸರ್ಕಾರಿ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಲಸಿಕೆ ಬೂತ್‌ಗಳನ್ನು ತೆರೆಯಲಾಗಿದೆ. ರೋಟರಿ ಪದಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲೆಡೆ ತೆರಳಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!