ಕಾರ್ಯಕ್ರಮ

ಜನತಾ ಕಾಲನಿಯಲ್ಲಿ ಪವರ್ ಸ್ಟಾರ್ ದಿವಂಗತ ಪುನಿತ್ ರಾಜ್ ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ: ಅನ್ನದಾನ

ಕುಶಾಲನಗರ, ಅ 29: ಕುಶಾಲನಗರದ ಜನತಾ ಕಾಲನಿ ಹಾಗೂ ಮುಳ್ಳುಸೋಗೆ ಗ್ರಾಮದ ಡಾ.ಪುನಿತ್ ರಾಜ್ ಕುಮಾರ್ ಅಭಿಮಾನಿ‌ ಬಳಗದ ವತಿಯಿಂದ ಜನತಾ ಕಾಲನಿಯಲ್ಲಿ ಪವರ್ ಸ್ಟಾರ್ ದಿವಂಗತ ಪುನಿತ್ ರಾಜ್ ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಪುಣ್ಯಸ್ಮರಣೆ ಅಂಗವಾಗಿ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಚಾಲನೆ ನೀಡಿದರು. ಪುನಿತ್ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಕೂಡ 2 ಸಾವಿರ ಮಂದಿಗೆ ಚಿಕನ್ ಬಿರಿಯಾನಿ ಮತ್ತು ವೆಜ್ ಪಲಾವ್ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಅಭಿಮಾನಿ ಬಳಗದ ಕಾರ್ಯದರ್ಶಿ ಸಚಿನ್, ನಮ್ಮೆಲ್ಲರ ಮನದಲ್ಲಿ ಪುನಿತ್ ಅಜರಾಮರವಾಗಿದ್ದಾರೆ. ಅವರ ನೆನಪಿನಲ್ಲಿ ಪ್ರತಿ ವರ್ಷ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ಕೂಡ ಆಯೋಜಿಸುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.
ಬಳಗದ ಸದಸ್ಯ ಲೋಕೇಶ್ ಮಾತನಾಡಿ, 50 ಕ್ಕೂ ಅಧಿಕ ಮಂದಿಯನ್ನು ಒಳಗೊಂಡ ಬಳಗದ ಸದಸ್ಯರು ವೈಯಕ್ತಿಕ ವೆಚ್ಚ ಹಾಗೂ ದಾನಿಗಳ ನೆರವಿನಿಂದ ಪ್ರತಿ ವರ್ಷ ಅನ್ನದಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭ ಅಭಿಮಾನಿ‌ ಬಳಗದ ಅಧ್ಯಕ್ಷ ಶಿವರಾಜ್, ಸದಸ್ಯರಾದ
ಮಹೇಶ, ಸಂತೋಷ್, ವೇಣುಕುಮಾರ್, ಜೀವನ್, ರಾಜೀವ್, ಅನುದೀಪ್, ಅನಂತ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!