ಕುಶಾಲನಗರ, ಆ 20: ಕುಶಾಲನಗರ ತಾಲ್ಲೂಕು ಆಡಳಿತ,ತಾಲ್ಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸ್ ಅವರ 110ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ದಿ.ಡಿ.ದೇವರಾಜ ಅರಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿ,ಉಳುವವನೆ ಭೂಮಿಯ ಒಡೆಯ ಕಾಯ್ದೆ ರಾಜ್ಯದ ಹಲವು ಜನರಿಗೆ ಭೂಒಡೆತನದ ಹಕ್ಕು ನೀಡಿತು. ನಿರುದ್ಯೋಗಿಗಳಿಗೆ ಸಹಾಯಧನದಂತಹ ಕಾರ್ಯಕ್ರಮಗಳನ್ನು ರೂಪಿಸಿ ಸಾವಿರಾರು ಯುವಜನರಿಗೆ ನೆರವಾದರು. ಜೀತ ಪದ್ಧತಿ, ಮಲಹೊರುವ ಪದ್ಧತಿ ನಿರ್ಮೂಲನೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು. ಸಮಾಜಮುಖಿ ಕಾರ್ಯಗಳತ್ತ ಅವರ ಮನಸು ಸದಾ ತುಡಿಯುತ್ತಿತ್ತು ಎಂದು ಹೇಳಿದರು.
ಅರಸು ಶ್ರೀಮಂತ ಅರಸು ಮನೆತನದಲ್ಲಿ ಹುಟ್ಟಿದರೂ ಸಾಮಾನ್ಯ ರೈತನಾಗಿ ಬದುಕಿ, ತಳ ಸಮುದಾಯದ ಏಳಿಗೆಗೆ ದೇವರಾಜ ಅರಸು ಶ್ರಮಿಸಿದರು. ಅವರ ತತ್ವ–ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಡಿಕೇರಿ ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲ ಕುಮಾರ್ ಮಾತನಾಡಿ,ಹೊಲ ಉಳುವವನೇ ಒಡೆಯ ಎಂದು ನೊಂದವರ ಧ್ವನಿಯಾಗಿ, ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಕೆಳವರ್ಗದವರ ಬಾಳಿಗೆ ಬೆಳಕಾದರು.ಜೀತ ಹಾಗೂ ಮಲ ಹೊರುವ ಪದ್ಧತಿಯ ನಿರ್ಮೂಲನೆಗೆ ಅರಸು ಶ್ರಮಿಸಿದರು. ರಾಜ್ಯದಲ್ಲಿ ಅವರು ನೀಡಿದ ಕೊಡುಗೆಗಳು ಮಾದರಿಯಾಗಿವೆ ಎಂದರು.
ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀದೇವಿ,ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸ್ವಾಮಿ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಕೃಷ್ಣ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್,ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಮಧು,ಕಂದಾಯ ನಿರೀಕ್ಷಕ ಸಂತೋಷ್ ಹಾಗೂ ವಿವಿಧ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Back to top button
error: Content is protected !!