ಕುಶಾಲನಗರ, ಆ 20: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ 2024-25ರ ಸಾಲಿನಲ್ಲಿ ರೂ.2.02 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದರು. ಸಂಘದ ಕಛೇರಿಯಲ್ಲಿ ನಡೆದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮಾಹಿತಿ ನೀಡಿದರು. ಸಂಘದ ಕಾರ್ಯವ್ಯಾಪ್ತಿಯನ್ನು ಜಿಲ್ಲಾಮಟ್ಟಕ್ಕೆ ವಿಸ್ತರಿಸುವ ಚಿಂತನೆ ಹೊಂದಲಾಗಿದೆ. ಈ ಸಾಲಿನಲ್ಲಿ ರೂ.402.69 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, ಅನುತ್ಪಾದಕ ಆಸ್ತಿಗಳಿಗೆ ರೂ 2.26 ಲಕ್ಷದಷ್ಟು, ಆದಾಯ ತೆರಿಗೆಗಳಿಗೆ ರೂ 10.64 ಲಕ್ಷ ಹಾಗೂ ಕಟ್ಟಡ ಮತ್ತು ಇತರೇ ಸವಕಳಿಗೆ ರೂ 10.03 ಲಕ್ಷಗಳನ್ನು ಕಾಯ್ದಿರಿಸಿದ ಒಟ್ಟು ರೂ.22.93 ಲಕ್ಷದಷ್ಟು ಮೊತ್ತವನ್ನು ಕಾಯ್ದಿರಿಸಲಾಗಿದೆ. ತದನಂತರ ಸಂಘವು ರೂ 2.02 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿರುತ್ತದೆ. ಸಂಘವು ಕಳೆದ 21 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ಬಾರಿಯು ಸಹ ಸಂಘವು ತನ್ನ ಲಾಭವನ್ನು ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಸದಸ್ಯರಿಗೆ ಕಳೆದ 20 ವರ್ಷಗಳಿಂದ ಶೇ.7ರಿಂದ ಶೇ.25 ರಷ್ಟು ಡಿವಿಡೆಂಟ್ ನೀಡುತ್ತಿದ್ದು,ಈ ಬಾರಿಯೂ ಕೂಡ ಶೇ.25ರಷ್ಟು ಡಿವಿಡೆಂಡ್ನ್ನು ನಮ್ಮ ಸದಸ್ಯರಿಗೆ ನೀಡುತ್ತಿದ್ದೇವೆ.
ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ. 23 ರ ಶನಿವಾರ ಪೂರ್ವಾಹ್ನ 11.00 ಗಂಟೆಗೆ ಕುಶಾಲನಗರದ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಅವರು ತಿಳಿಸಿದರು.
ಸಂಘದ ‘ಎ’ ತರಗತಿ ಸದಸ್ಯರುಗಳು ತಮ್ಮ ಸ್ವಂತ ಕಟ್ಟಡದಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದು ಉತ್ತಮ ವ್ಯವಹಾರವನ್ನು ನಡೆಸುತ್ತಿರುವವರಿಗೆ ಸದಸ್ಯರ ಅನುಕೂಲಕ್ಕಾಗಿ, ಸಂಘದಲ್ಲಿ 24 ವಿವಿಧ ಸಾಲಗಳನ್ನು ವಿತರಿಸುತ್ತಿದೆ.
ಸಂಘದ ಸದಸ್ಯರುಗಳ ಹಾಗೂ ನಾಮಮಾತ್ರ ಸಂಘದ ಸದಸ್ಯರುಗಳ ಮತ್ತು ನಾಮಮಾತ್ರ ಸದಸ್ಯರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಾಲವನ್ನು ಪ್ರಾರಂಭಿಸಿದೆ.
ಸAಘದ ಸಾಲಗಾರ ಸದಸ್ಯರ ಅನುಕೂಲಕ್ಕಾಗಿ ಸಂಘದಿಂದ ಸದಸ್ಯರುಗಳಿಗೆ ನೀಡುತ್ತಿರುವ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿದರವನ್ನು ಶೇಕಡ 0.50 (ಅರ್ಧದಷ್ಟು) ಕಡಿಮೆ ಮಾಡಲಾಗಿದೆ.
ಸಂಘದ ವಸೂಲಾತಿ ಪ್ರಗತಿಯು ಶೇಕಡ 95.37ರಷ್ಟು ದಾಟಿರುವ ಕಾರಣ ಸಂಘವು ಈ ಬಾರಿ ಲೆಕ್ಕ ಪರಿಶೋಧನಾ ವರದಿಯ ಶ್ರೇಣಿಯಲ್ಲಿ (ಗ್ರೇಡ್) “ಎ” ಶ್ರೇಣಿಯನ್ನು ಹೊಂದಿದೆ.
ಸಂಘವು ವನಸಿರಿಯಂತಹ ಸಾಮಾಜಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದರೂ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಸಂಘದ ಸಾರ್ವಜನಿಕ ಸೇವಾ ಕಾರ್ಯಗಳು ಮುಂದುವರೆದು ಕುಶಾಲನಗರ ಕೋಣಮಾರಿಯಮ್ಮ ದೇವರ ಟ್ರಸ್ಟ್ ಇವರ ನೂತನ ಸಮುದಾಯ ಭವನ ನಿರ್ಮಾಣಕ್ಕೆ ರೂ 25,000 ಸಹಾಯ ಧನವನ್ನು ನೀಡಿದ್ದು, ಕೂಡ್ಲೂರು ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ಅಬಾಕಸ್ ಪುಸ್ತಕ ಮತ್ತು ಕಲಿಕಾ ಸಾಮಾಗ್ರಿಗಳನ್ನು ರೂ 37,100 ರೂಪಾಯಿಗಳ ವೆಚ್ಚದಲ್ಲಿ ಖರೀದಿಸಿ ಆ ಶಾಲೆಯ ಎಲ್ಲಾ ಬಡಮಕ್ಕಳಿಗೆ ವಿತರಣೆ ಮಾಡಿ ಕುಶಾಲನಗರ ಸರಕಾರ ಪ್ರಥಮ ದರ್ಜೆ ಕಾಲೇಜಿನ ನೂತನ ಸಭಾಂಗಣಕ್ಕೆ ರೂ 16,000 ವೆಚ್ಚದಲ್ಲಿ ವೇದಿಕೆಯ ಹಿಂಭಾಗದ ಪರದೆಯನ್ನು ಸಂಘದಿಂದ ನೀಡಿದ್ದು, ಇವೆಲ್ಲವೂ ಸಂಘವು ನಮ್ಮ ಈ ಸಮಾಜದ ಮೇಲಿಟ್ಟಿರುವ ಕಾಳಜಿಯಾಗಿರುತ್ತದೆ. ಕಳೆದ ಮಹಾಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕುಶಾಲನಗರ ಸರಕಾರ ಪದವಿ ಪೂರ್ವ ಕಾಲೇಜಿಗೆ ರೂ 11 ಲಕ್ಷಗಳ ವೆಚ್ಚದಲ್ಲಿ ಉನ್ನತ ದರ್ಜೆಯ ಗಣಕಯಂತ್ರ ಪ್ರಯೋಗಾಲಯ ಒದಗಿಸಿ ಕೊಡಲು ತೀರ್ಮಾನಿಸಲಾಗಿದೆ. ಮುಂದಿನ 4 ವರ್ಷಗಳಿಗೆ ಸಂಘವು ಪ್ರಾರಂಭವಾಗಿ 25 ವರ್ಷ ಪೂರೈಸುತ್ತಿದ್ದು ಸದ್ರಿ ಬೆಳ್ಳಿ ಮಹೋತ್ಸವವನ್ನು ಆಚರಿಸಲು ಈಗಿನಿಂದಲೇ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಬೆಳ್ಳಿ ಮಹೋತ್ಸವದ ಸವಿ ನೆನಪಿಗಾಗಿ ಸೂಕ್ತ ಸ್ಮಾರಕ ಭವನವನ್ನು ನಿರ್ಮಾಣ ಮಾಡಿ, ಬೆಳ್ಳಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಿದ್ದೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಸೇರಿದಂತೆ ನಿರ್ದೇಶಕರು ಇದ್ದರು.
Back to top button
error: Content is protected !!