ಕುಶಾಲನಗರ, ಆ 18:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ರಚನೆ ಮಾಡಲಾಯಿತು. 
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹ ಸಂಬಂಧ ಗ್ರಾಪಂ ಸಭಾಂಗಣದಲ್ಲಿ ರೈತರು, ಬೆಳೆಗಾರರ ಸಭೆ ನಡೆಯಿತು. ಗ್ರಾಪಂ ವ್ಯಾಪ್ತಿಯಲ್ಲಿ ವನ್ಯ ಜೀವಿಗಳಿಂದ ಉಂಟಾಗುತ್ತಿರುವ ಅನಾಹುತಗಳು ಮತ್ತು ಬೆಳೆಹಾನಿ ತಡೆಗಟ್ಟಲು ಸೂಕ್ತ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ನೆರೆದಿದ್ದ ರೈತರು ಸಭೆಯಲ್ಲಿ ವನ್ಯಜೀವಿಗಳ ಉಪಟಳದ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ರೂಪಿಸಲು 11 ಮಂದಿ ಒಳಗೊಂಡ ಹೋರಾಟ ಸಮಿತಿ ರಚಿಸಲಾಯಿತು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಶಾಸಕರು, ಸಂಸದರು, ರೈತ ಮುಖಂಡರ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು.
ವನ್ಯಜೀವಿಗಳ ಉಪಟಳಕ್ಕೆ ಕಡಿವಾಣ ಹಾಕಲು ಕೋರಿ ಮೀನುಕೊಲ್ಲಿ ಶಾಖೆ ಉಪ ವಲಯ ಅರಣ್ಯಾಧಿಕಾರಿಗೆ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಪುಂಡಾನೆಯೊಂದನ್ನು ಕೂಡಲೆ ಸೆರೆ ಹಿಡಿಯಬೇಕಿದೆ. ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ, ಕಾಡು ಹಂದಿ, ಮುಳ್ಳುಹಂದಿ, ನವಿಲು, ಮಂಗ, ಕೆಂಜರಿಗಳ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಉಂಟಾಗುತ್ತಿದೆ. ಇವುಗಳ ನಡುವೆ ಹುಲಿ ಕಾಟ ಕೂಡ ಹೆಚ್ಚಾಗಿದೆ.
ಈ ಭಾಗದಲ್ಲಿ ಅಳವಡಿಸಿರುವ ರೈಲ್ವೇ ಬ್ಯಾರಿಕೆಡ್ ಅವೈಜ್ಞಾನಿಕವಾಗಿದೆ. ಸೋಲಾರ್ ಬೇಲಿ ನಿಷ್ಪ್ರಯೋಜಕವಾಗಿದೆ ಎಂದು ಆರೋಪಿಸಿದರು.
ಹಾನಿಗೊಳಗಾದ ಬೆಳೆಗಳಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕಿದೆ. ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕಿದೆ, ಸಮರ್ಪಕವಾದ ಆನೆ ಕಂದಕ ರಚಿಸಬೇಕಿದೆ, ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೆಡ್ ಗೆ ಸ್ಲೈಡಿಂಗ್ ಗೇಟ್ ಅಳವಡಿಸಬೇಕಿದೆ. ಮುಂದಿನ ಒಂದು ತಿಂಗಳ ಒಳಗಾಗಿ ಈ ಎಲ್ಲಾ ಬೇಡಿಕೆಗಳಿಗೆ ಸೂಕ್ತವಾದ ಸ್ಪಂದನೆ ದೊರೆಯದಿದ್ದಲ್ಲಿ ಪಕ್ಷಾತೀತವಾಗಿ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ರಕ್ಷಿತ್ ಮಾವಜಿ, ಕೆ.ವಿ.ಪ್ರೇಮಾನಂದ, ಮಾಜಿ ಸದಸ್ಯ ಸುಮೇಶ್ ಸೇರಿದಂತೆ ರೈತರು, ಬೆಳೆಗಾರರು ಇದ್ದರು.
Back to top button
error: Content is protected !!