ಸುದ್ದಿಗೋಷ್ಠಿ

ಮೇ 13, 14, 15 ರಂದು ಕುಶಾಲನಗರದಲ್ಲಿ ರಾಜ್ಯಮಟ್ಟದ ಪ್ರೋ ಕಬಡ್ಡಿ ಹಬ್ಬ

ಕುಶಾಲನಗರ, ಮೇ 07: ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ವತಿಯಿಂದ ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ” ಬಿ. ಜಿ.ಎಸ್- ಕಪ್” ಹೊನಲು ಬೆಳಕಿನ ಕಬಡ್ಡಿ ಹಬ್ಬವನ್ನು ಮೇ 13,14 ಮತ್ತು 15 ರಂದು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯ ಅಧ್ಯಕ್ಷ ಎಂ. ಡಿ.ಕೃಷ್ಣಪ್ಪ ಹೇಳಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ನಮ್ಮ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯ ಮಟ್ಟದ ಸೀನಿಯರ್ಸ್ ಚಾಂಪಿಯನ್ ಶಿಪ್ ರಾಜ್ಯಮಟ್ಟದ ಪ್ರೊ ಕಬಡ್ಡಿ ಪಂದ್ಯಾಟವನ್ನು ಮೊದಲ ಬಾರಿಗೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆಸುತ್ತಿದ್ದೇವೆ. ಮೇ 13 ರಂದು ನಡೆಸಲು ಉದ್ದೇಶಿಸಿರುವ ಪ್ರೊ ಕಬಡ್ಡಿ ಕ್ರೀಡಾಕೂಟದ ಅಂಗವಾಗಿ ಸಂಜೆ 4 ಗಂಟೆಗೆ, ಕುಶಾಲನಗರದ ಬೈಚನಹಳ್ಳಿಯ ಮಾರಮ್ಮ ದೇವಸ್ಥಾನದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವರೆಗೆ ಕಲಾತಂಡಗಳ ಮೂಲಕ ಬೃಹತ್ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ಸಮಾಜದ ಮಠಾಧೀಶರು, ಜಿಲ್ಲೆಯ ಜನಾಂಗದ ಜನಪ್ರತಿನಿಧಿಗಳು, ರಾಜ್ಯಮಟ್ಟದ ಹಲವು ತಂಡಗಳು, ಮತ್ತು ರಾಷ್ಟ್ರೀಯ ಮಟ್ಟದ ಖ್ಯಾತ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ಸೀನಿಯರ್ ಪುರುಷರ ಕಬಡ್ಡಿ ಚಾಂಪಿಯನ್ ಶಿಪ್ ಮತ್ತು ಕರ್ನಾಟಕ ರಾಜ್ಯ ಮಟ್ಟದ ಮಹಿಳೆಯರ ಕಬಡ್ಡಿ ಆಹ್ವಾನಿತ ತಂಡಗಳು ಭಾಗವಹಿಸಲಿವೆ.

ಈ ಕ್ರೀಡಾಕೂಟದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದು, ಉಳಿದಂತೆ ಶ್ರೀ ಶಂಭುನಾಥ ಸ್ವಾಮೀಜಿ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಡಿಕೇರಿ ಕ್ಷೇತ್ರದ ಶಾಸಕ ಡಾ‌ ಮಂತರ್ ಗೌಡ, ಅರಕಲಗೂಡು ಶಾಸಕ ಎ.ಮಂಜು, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ, ಭೋಜೇಗೌಡ, ಸೂರಜ್ ರೇವಣ್ಣ, ಮಾಜಿ ಶಾಸಕ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಜಿ. ಮೇದಪ್ಪ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಕ್ರೀಡಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೃಷ್ಣಪ್ಪ ಅವರು ಕೋರಿದರು.

ವೇದಿಕೆಯ ಜಿಲ್ಲಾ ಖಜಾಂಚಿ ಚಂದ್ರಶೇಖರ್ ಹೇರೂರು ಮಾತನಾಡಿ, ಪುರುಷರ ವಿಜೇತ ತಂಡಗಳಿಗೆ ಮೊದಲನೆಯ ಬಹುಮಾನ ಒಂದು ಲಕ್ಷ ನಗದು ಮತ್ತು ಆಕರ್ಷಕ ಟ್ರೋಪಿ, ಎರಡನೇ ಬಹುಮಾನ 50,000 ಮತ್ತು ಆಕರ್ಷಕ ಟ್ರೋಫಿ, ಮೂರನೇ ಮತ್ತು ನಾಲ್ಕನೇ ಬಹುಮಾನವಾಗಿ 25000 ಮತ್ತು ಆಕರ್ಷಕ ಟ್ರೋಪಿ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ಜೈರಾಜ್, ಪ್ರೋ ಕಬ್ಬಡಿ ಆಟಗಾರ ಅವಿನಾಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎಚ್.ಕಿರಣ್, ತಾಲೂಕು ನಿರ್ದೇಶಕ ಸುನಿತ್ ಕುಮಾರಪ್ಪ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!