ಪ್ರಕಟಣೆ

ಸ್ಥಳೀಯರಿಗೆ ಗುತ್ತಿಗೆ ನೀಡಿ‌ ಸಹಕರಿಸಲು ಸಂಘದ ಪದಾಧಿಕಾರಿಗಳ ಮನವಿ

ಕುಶಾಲನಗರ, ಸೆ 01: ಮುಂಬರುವ ಗೌರಿ ಗಣೇಶೋತ್ಸವ ಸೇರಿದಂತೆ ಎಲ್ಲಾ
ಹಬ್ಬ, ಹರಿದಿನ, ವಿಶೇಷ ಸಮಾರಂಭ ಸಂದರ್ಭ ಐಡಿ ಕಾರ್ಡ್ ಹೊಂದಿರುವ ನೊಂದಾಯಿತ ಸದಸ್ಯರು ಮತ್ತು ಅಂಗಡಿ ಮಳಿಗೆ ಹೊಂದಿರುವ ಮಾಲೀಕರಿಗೆ ಮಾತ್ರ ಆರ್ಡರ್ ನೀಡಿ ಸಹಕರಿಸುವಂತೆ ಕುಶಾಲನಗರ ತಾಲೂಕು ಕಾವೇರಿ ಶಾಮಿಯಾನ, ಸೌಂಡ್ಸ್ ಮತ್ತು ಡೆಕೋರೇಷನ್ ಮಾಲೀಕರ ಸಂಘ ಮನವಿ ಮಾಡಿದೆ.

ಸಂಘದ ಕಛೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಸದಸ್ಯರಲ್ಲದವರು ಕಾರ್ಯಕ್ರಮದ ಗುತ್ತಿಗೆ ಪಡೆದು ವಂಚಿಸುತ್ತಿರುವ ಕೆಲವು ಪ್ರಕರಣಗಳ ಬಗ್ಗೆ ಚರ್ಚಿಸಲಾಯಿತು. ಹೊರ ರಾಜ್ಯದ ಡಿಜೆಗಳು ಜಿಲ್ಲೆಯೊಳಗೆ ರಾರಾಜಿಸುತ್ತಿರುವ ಬಗ್ಗೆ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಡೈಮಂಡ್ ಮಣಿ, ಕಾವೇರಿ ಶಾಮಿಯಾನ ಮಾಲೀಕರ ಸಂಘ ಕಳೆದ 7 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಕಳೆದ ವರ್ಷ ತಾಲೂಕು‌ ಮಟ್ಟದ ಸಂಘ ರಚಿಸಿ ನೊಂದಾಯಿಸಿಕೊಂಡಿದ್ದು ನೆಲ್ಲಿಹುದಿಕೇರಿಯಿಂದ ಹಿಡಿದು ಶಿರಂಗಾಲದವರೆಗೆ ತಾಲೂಕಿನಾದ್ಯಂತ 50 ಮಂದಿ ಸದಸ್ಯರನ್ನು ಹೊಂದಿದೆ. ಮುಂದೆಯೂ ಕೂಡ ಹೆಚ್ಚಿನ ಸದಸ್ಯತ್ವದ ಗುರಿ ಹೊಂದಲಾಗಿದೆ.
ಇತ್ತೀಚಿಗೆ ಸಂಘದ ಸದಸ್ಯರಲ್ಲದವರು ಕೂಡ ಕಾರ್ಯಕ್ರಮಗಳ ಗುತ್ತಿಗೆ ಪಡೆದುಕೊಳ್ಳುವುದು ಕಂಡುಬಂದಿದೆ. ಅಂಗಡಿ ಇಲ್ಲದೆ, ಸದಸ್ಯತ್ವ ಪಡೆಯದೆ ಇವೆಂಟ್ ಮೇನೇಜ್ಮೆಂಟ್ ಹೆಸರಿನಲ್ಲಿ ನೇರವಾಗಿ ಗುತ್ತಿಗೆ ಪಡೆಯುವ ಕೆಲಸಕ್ಕೆ ಕೆಲವರು ಮುಂದಾಗಿದ್ದಾರೆ, ಈ ಪೈಕಿ ಕೆಲವರು ಮುಂಗಡ ಹಣ ಪಡೆದು ವಂಚಿಸಿದ ಪ್ರಕರಣಗಳಿವೆ. ನಮ್ಮ ಸಂಘದ ಪದಾಧಿಕಾರಿಗಳು ಹಗಲು ರಾತ್ರಿ ಎನ್ನದೆ ಸೇವೆ ಒದಗಿಸುತ್ತಿದ್ದು, ಸಂಘ ಸಂಸ್ಥೆಗಳು, ಇಲಾಖೆಗಳು ನೇರವಾಗಿ ಸಂಘದ ನೊಂದಾಯಿತ ಸದಸ್ಯರಿಗೆ ಗುತ್ತಿಗೆ ನೀಡಬೇಕಿದೆ. ಒಂದು ವೇಳೆ ಹೊರಗಿನಿಂದ‌ ಡಿಜೆ ತರಿಸಿದ್ದೇ ಆದಲ್ಲಿ ಉಳಿದ ಸಾಮಗ್ರಿಗಳನ್ನು ನಾವು ಒದಗಿಸುವುದಿಲ್ಲ ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎನ್.ವಿಶ್ವನಾಥ್, ರವಿ ಬಿ.ಎಂ, ಗೌರವಾಧ್ಯಕ್ಷ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಸೈಫ್ ಕೆ.ಜಿ, ಕಾರ್ಯದರ್ಶಿ ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಚನ್ನರಾಜು ಎಂ.ಎಸ್, ಖಜಾಂಚಿ ಸಂತೋಷ್, ನಿರ್ದೇಶಕರಾದ ಜಿ.ಎಂ.ನಾಗರಾಜು, ಕೆ.ಎಸ್.ರವಿ, ಕೃಷ್ಣ ಎ.ಎಸ್ ಮತ್ತು ಸದಸ್ಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!