ಕುಶಾಲನಗರ, ಏ 23: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೆರರಿಸ್ಟ್ ಎಂದು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗಣಪತಿ ದೇವಾಲಯ ಮುಂಭಾಗ ಪ್ರತಿಭಟಿಸಿದ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಲ್ಲಿಕಾರ್ಜುನ ಭಾವಚಿತ್ರ ಧಹಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ದೇಶದ ಉನ್ನತ ಹುದ್ದೆ ಅಲಂಕರಿಸಿರುವ ಪ್ರಧಾನಿಯನ್ನು ಟೆರರಿಸ್ಟ್ ಎಂದು ಸಂಬೋಧಿಸಿ ಅವಹೇಳನ ಮಾಡಿರುವುದು ಖಂಡನೀಯ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪ್ರಮುಖರು ದೇಶ ಹಾಗೂ ದೇಶದ ಪ್ರಧಾನಿಯನ್ನು ಹಲವು ಬಾರಿ ಅವಹೇಳನವಾಗಿ ಸಂಬೋಧಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕ್ರಮಕ್ಕೆ ಕೋರಿ ದೂರು ಸಲ್ಲಿಸಿದರೂ ಕಾಂಗ್ರೆಸ್ ಸರಕಾರ ಯಾವುದೇ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ. ಹಿಂಬಾಗಿಲಿಂದ ಪೊಲೀಸ್ ವ್ಯವಸ್ಥೆ ನಿಯಂತ್ರಿಸುವ ಮೂಲಕ ಬಿಜೆಪಿ ಕಾರ್ಯಕರ್ತರ ವಿರುದ್ದವೇ ಸುಮೋಟೋ ದಾಖಲಿಸಲು ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ಯಾವುದೇ ದೂರದೃಷ್ಟಿ ಇಲ್ಲದ ಕಾಂಗ್ರೆಸ್ ನಾಯಕ ಎಂದರೆ ಅದು ಮಲ್ಲಿಕಾರ್ಜುನ ಖರ್ಗೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಖರ್ಗೆ ಕುಟುಂಬ ಪ್ರತಿನಿಧಿಸುತ್ತಿರುವ ಅಭಿವೃದ್ಧಿ ವಂಚಿತ ಹೈದರಾಬಾದ್ ಕರ್ನಾಟಕ ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಭಯೋತ್ಪಾದನೆ ಮಿತಿಮೀರಿತ್ತು. ಭಯೋತ್ಪಾದನೆ ವಿರುದ್ದದ ದಾಳಿಗಳು, ದೇಶದ ಏಕತೆಗೆ ಕೈಗೊಂಡ ಕ್ರಮಗಳು, ಮಹಿಳಾ ಮೀಸಲಾತಿ ಮತ್ತಿತರ ಪ್ರತಿಯೊಂದು ವಿಚಾರದಲ್ಲಿ ಕೂಡ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಸದಾ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ವಿಶ್ವ ಗುರು ಮೋದಿಯನ್ನು ಭಯೋತ್ಪಾದಕ ಎನ್ನುವವರು ಪಂಜಾಬ್ ನಲ್ಲಿ ಭಯೋತ್ಪಾದನೆ ಗೆ ಕುಮ್ಮಕ್ಕು ನೀಡಿದವರು ಯಾರು ಎಂಬುದನ್ನು ಅವಲೋಕಿಸಬೇಕಿದೆ. ಮುಂದೆ ಇಂತಹ ಅವಹೇಳನ ಪುನರಾವರ್ತನೆ ಆದಲ್ಲಿ ದೇಶಾದ್ಯಂತ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಹಿಳಾ ಕಾರ್ಯಕರ್ತೆ ಗೀತಾ ಮಾತನಾಡಿ, ಮಹಿಳೆಯರ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ನವನೀತ್ ಪೊನ್ನೇಟಿ, ಪ್ರವೀಣ್ ಮಲ್ಲಜಿರ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಚೆಂಗಪ್ಪ,
ಕಾರ್ಯದರ್ಶಿ ರಕ್ಷಿತ್ ಮಾವಾಜಿ, ಮಂಡಲ ಅಧ್ಯಕ್ಷ ಗೌತಮ್, ನಗರ ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಕಾರ್ಯದರ್ಶಿಗಳಾದ ಸಚಿನ್, ಆದರ್ಶ್,
ನಗರ ಬಿಜೆಪಿ ಅಧ್ಯಕ್ಷ ಚರಣ್, ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಮಧುಸೂದನ್, ಎಂ ವಿ ನಾರಾಯಣ್, ಡಿ.ಕೆ.ತಿಮ್ಮಪ್ಪ, ಚಂದ್ರಶೇಖರ್ ಹೇರೂರು, ಭಾಸ್ಕರ್ ನಾಯಕ್,, ಮೋಹಿತ್, ಪದ್ಮನಾಭ, ಪ್ರಸಿನ್, ಸುಮನ್, ಗೀತಾಂಜಲಿ, ಅವಿನಾಶ್, ಶಿವಾಜಿ, ಮಣಿಕಂಠ, ದೊರೆ ಗಣಪತಿ ಮತ್ತಿತರರು ಇದ್ದರು.
Back to top button
error: Content is protected !!